ಸುದ್ದಿಗಳು

ದೇಶದ್ರೋಹ ಪ್ರಕರಣ: ಜಾಮೀನಿಗಾಗಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಶಾರ್ಜಿಲ್‌ಗೆ ಸೂಚಿಸಿದ ದೆಹಲಿ ಹೈಕೋರ್ಟ್

ಜಾಮಿಯಾ ಮತ್ತು ಎಎಂಯು ವಿಶ್ವವಿದ್ಯಾಲಯಗಳಲ್ಲಿ ಸಿಎಎ/ಎನ್ಆರ್‌ಸಿ ವಿರುದ್ಧ ಭಾಷಣ ಮಾಡಿದ್ದಕ್ಕಾಗಿ ತನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದ್ದು ಈ ಸಂಬಂಧ ಜಾಮೀನು ನೀಡುವಂತೆ ಕೋರಿ ಇಮಾಮ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Bar & Bench

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಪಡೆಯಲು ಕೆಳ ನ್ಯಾಯಾಲಯವನ್ನು ಸಂಪರ್ಕಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ಶಾರ್ಜೀಲ್ ಇಮಮಾಗೆ ಸೂಚಿಸಿದೆ.

ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹ ಆರೋಪಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಮೇಲ್ಮನವಿಗಳು ಹಾಗೂ ವಿಚಾರಣೆಯನ್ನು ತಡೆಹಿಡಿಯಬೇಕು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿರುವ ಹಿನ್ನಲೆಯಲ್ಲಿ ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಪ್ರಕಟಿಸಿತು.

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಈಗಾಗಲೇ ಬಾಕಿ ಉಳಿದಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಇಮಾಮ್‌ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್‌ 2014ರ ಪ್ರಕರಣವೊಂದರಲ್ಲಿ ನೀಡಿದ್ದ ಆದೇಶದ ಪ್ರಕಾರ ಯಾವುದೇ ಜಾಮೀನು ಅರ್ಜಿ ಮೊದಲು ವಿಚಾರಣಾ ನ್ಯಾಯಾಲಯಕ್ಕೆ ಹೋಗಬೇಕು. ಅಲ್ಲಿ ಪರಿಹಾರ ದೊರೆಯದಿದ್ದಾಗ ಮಾತ್ರ ಹೈಕೋರ್ಟ್‌ಗೆ ಮನವಿ ಸಲ್ಲಿಸಬಹುದು ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅಮಿತ್‌ ಪ್ರಸಾದ್‌ ವಿಚಾರಣೆ ವೇಳೆ ಆಕ್ಷೇಪ ವ್ಯಕ್ತಪಡಿಸಿದರು.

ಎಸ್‌ಪಿಪಿ ವಾದವನ್ನು ದಾಖಲಿಸಿಕೊಂಡ ಹೈಕೋರ್ಟ್‌, ಕೆಳ ನ್ಯಾಯಾಲಯವನ್ನು ಸಂಪರ್ಕಿಸಲು ಇಮಾಮ್‌ ಪರ ಹಾಜರಾದ ವಕೀಲ ತನ್ವೀರ್‌ ಅಹ್ಮದ್‌ ಮಿರ್‌ ಅವರಿಗೆ ಅನುಮತಿ ನೀಡಿತು.