ಸುದ್ದಿಗಳು

ಪೊಲೀಸ್ ಠಾಣೆ ಸಿಸಿಟಿವಿಗಳಿಗೇಕೆ ಆಡಿಯೋ ಇಲ್ಲ? ರಾಜ್ಯ ಸರ್ಕಾರ, ಠಾಣಾಧಿಕಾರಿಯನ್ನು ಪ್ರಶ್ನಿಸಿದ ದೆಹಲಿ ಹೈಕೋರ್ಟ್

Bar & Bench

ಪೊಲೀಸ್‌ ಠಾಣೆಯೊಂದರಲ್ಲಿ ನೈಟ್‌ ವಿಷನ್‌ ಹಾಗೂ ಆಡಿಯೊ ವ್ಯವಸ್ಥೆ ಇರುವ ಸಿಸಿಟಿವಿಗಳನ್ನು ಏಕೆ ಅಳವಡಿಸಿಲ್ಲ ಎಂದು ರಾಜ್ಯ ಸರ್ಕಾರ ಮತ್ತು ಠಾಣಾಧಿಕಾರಿಯನ್ನು ದೆಹಲಿ ಹೈಕೋರ್ಟ್‌ ಪ್ರಶ್ನಿಸಿದೆ.

ತಮ್ಮ ಅಧಿಕೃತ ಮತ್ತು ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ಅಡ್ಡಿಪಡಿಸಿರುವ ಸಂಬಂಧ ನಿಸ್ಪಕ್ಷಪಾತ ಮತ್ತು ಆಳ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ಪಹಾಡ್‌ಗಂಜ್‌ನ ಹಜರತ್‌ ಖ್ವಾಜಾ ಬಕ್ವಿ ಬಿಲ್ಲಾ ದರ್ಗಾದ ಇಮಾಮ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಅನು ಮಲ್ಹೋತ್ರಾ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಮಸೀದಿಯ ಅಕ್ರಮ ನಿರ್ವಹಣೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ತಮಗೆ ಬೆದರಿಕೆ ಹಾಕಿದ್ದು ಪೊಲೀಸ್‌ ಠಾಣಾಧಿಕಾರಿ ಸಮ್ಮುಖದಲ್ಲಿ ಅಮಾನವೀಯವಾಗಿ ವರ್ತಿಸಿದ್ದಾನೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಇಮಾಮ್‌ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಸಿಸಿಟಿವಿ ಆಡಿಯೊ ಲಭ್ಯವಿಲ್ಲ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಆಗ ಪೀಠ, “ಪೊಲೀಸ್‌ ಠಾಣೆಗಳು ಮತ್ತು ಅದರ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ನೈಟ್‌ ವಿಷನ್‌ ಮತ್ತು ಆಡಿಯೊ ವ್ಯವಸ್ಥೆ ಇರುವ ಸಿಸಿಟಿವಿಗಳನ್ನು ಅಳವಡಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿದೆ” ಎಂಬುದಾಗಿ ವಿವರಿಸಿತು. ಪ್ರಕರಣದ ಮುಂದಿನ ವಿಚಾರಣೆ ಹೊತ್ತಿಗೆ ಸರ್ಕಾರ ತಪ್ಪದೇ ಈ ಕುರಿತು ಸಮಜಾಯಿಷಿ ನೀಡಬೇಕು ಎಂದು ನಿರ್ದೇಶಿಸಿತು. ಮುಂದಿನ ವಿಚಾರಣೆ ಜುಲೈ 27ಕ್ಕೆ ನಿಗದಿಯಾಗಿದೆ.