Delhi High Court S Block  
ಸುದ್ದಿಗಳು

ಪೇಟೆಂಟ್ ಉಲ್ಲಂಘನೆ ಮೊಕದ್ದಮೆ: ₹217 ಕೋಟಿ ಪರಿಹಾರ ನೀಡಲು ಮೊಬಿ ಆಂಟೆನಾಗೆ ಸೂಚಿಸಿದ ದೆಹಲಿ ಹೈಕೋರ್ಟ್‌

Bar & Bench

ಪೇಟೆಂಟ್‌ ಉಲ್ಲಂಘಿಸಿದ ಮೊಕದ್ದಮೆಗೆ ಸಂಬಂಧಿಸಿದಂತೆ ಕಮ್ಯುನಿಕೇಶನ್ ಕಾಂಪೊನೆಂಟ್ ಆಂಟೆನಾ ಇಂಕ್‌ಗೆ (ಸಿಸಿಎಐ) ನಷ್ಟವಾದ ಲಾಭದ ಹಾನಿಯನ್ನು ತುಂಬಿಕೊಡುವ ನಿಟ್ಟಿನಲ್ಲಿ ₹217 ಕೋಟಿ ಪಾವತಿಸುವಂತೆ ಮೊಬಿ ಆಂಟೆನಾ ಟೆಕ್ನಾಲಜೀಸ್‌ಗೆ ದೆಹಲಿ ಹೈಕೋರ್ಟ್‌ ಈಚೆಗೆ ಆದೇಶಿಸಿದೆ [ಕಮ್ಯುನಿಕೇಶನ್ ಕಾಂಪೊನೆಂಟ್ ಆಂಟೆನಾ ಇಂಕ್‌ ಮತ್ತು ಮೊಬಿ ಆಂಟೆನಾ ಟೆಕ್ನಾಲಜೀಸ್ ನಡುವಣ ಪ್ರಕರಣ].

ಪೇಟೆಂಟ್‌ ಉಲ್ಲಂಘಿಸಿದ ಉತ್ಪನ್ನವನ್ನು ಮಾರಾಟ ಮಾಡಿದ್ದರೆ ಅದರಿಂದ ಪೇಟೆಂಟ್ ಪಡೆದಿದ್ದವರು ಗಳಿಸಬಹುದಾಗಿದ್ದ ಸಂಭಾವ್ಯ ಸಮಂಜಸ ಲಾಭವು ಹಾನಿಗಳನ್ನು ನಿರ್ಧರಿಸಲು ಸೂಕ್ತ ಆಧಾರವಾಗಿದೆ ಎಂದು ಸ್ಟ್ರಿಕ್ಸ್ ಲಿಮಿಟೆಡ್  ಮತ್ತು ಮಹಾರಾಜಾ ಅಪ್ಲೈಯನ್ಸ್ ಲಿಮಿಟೆಡ್‌ ನಡುವಣ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಉಲ್ಲೇಖಿಸಿದರು.

ಬೈಸೆಕ್ಟರ್ ಅರೇ ಆಂಟೆನಾಗಳಲ್ಲಿ 'ಅಸಿಮ್ಮೆಟ್ರಿಕಲ್ ಬೀಮ್ಸ್ ಫಾರ್ ಸ್ಪೆಕ್ಟ್ರಮ್ ಎಫಿಷಿಯನ್ಸಿ' ಎಂಬ ಆವಿಷ್ಕಾರಕ್ಕಾಗಿ ನೀಡಲಾದ ಪೇಟೆಂಟ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಮೊಬಿ ವಿರುದ್ಧ ಸಿಸಿಎಐ ಹೂಡಿದ್ದ ಪೇಟೆಂಟ್ ಉಲ್ಲಂಘನೆ ಮೊಕದ್ದಮೆಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕಿರಣದ ಮಾದರಿಯನ್ನು ಬದಲಾಯಿಸುವ ಮೂಲಕ, ತರಂಗಾಂತರದ ಬಳಕೆಯಲ್ಲಿ ಹೆಚ್ಚಿನ ಪರಿಣಾಮಕಾರಿತ್ವವನ್ನು ಸಾಧಿಸಬಹುದು ಎಂಬುದು ಪೇಟಂಟ್‌ನ ವಿಶೇಷತೆಯಾಗಿದೆ ಎನ್ನುತ್ತದೆ ದಾವೆ. ಫಿರ್ಯಾದಿದಾರರ ಪ್ರಕಾರ, ಅವರ ಬೈಸೆಕ್ಟರ್ ಅರೇ ಆಂಟೆನಾಗಳನ್ನು ಮೊಬಿಯಿಂದ ಬದಲಾಯಿಸಬಹುದಾಗಿದೆ.

ಹೆಚ್ಚಿನ ಸಂಖ್ಯೆಯ ಚಂದಾದಾರರನ್ನು ಒಂದೇ ತರಂಗಾಂತರ ಬಳಸಿ ಸಂಪರ್ಕಿಸಲು ಅನುಮತಿಸುವಾಗ, ಕರೆಗಳ ಗುಣಮಟ್ಟವನ್ನು ನಿರ್ವಹಿಸುವುದಕ್ಕಾಗಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಹೆಚ್ಚಿನ ಪರಿಣಾಮಕಾರಿತ್ವ ಸಾಧಿಸುವುದು ಆವಿಷ್ಕಾರದ ಉದ್ದೇಶವಾಗಿದೆ ಎಂದು ವಾದಿಸಲಾಗಿತ್ತು.

ವಾದ ಆಲಿಸಿದ ನ್ಯಾಯಾಲಯ ನಷ್ಟವಾದ ಲಾಭವನ್ನು ಆಧರಿಸಿ ಹಾನಿಗೆ ಪರಿಹಾರ ನೀಡುವಂತೆ ತೀರ್ಪು ನೀಡಿತು. ಅದರಂತೆ ಸಿಸಿಎಐ ಪರವಾಗಿ ಶಾಶ್ವತ ತಡೆಯಾಜ್ಞೆಯ ಆದೇಶ ನೀಡಿದ ಪೀಠ ತೀರ್ಪು ಪ್ರಕಟವಾದ ದಿನದಿಂದ ವರ್ಷಕ್ಕೆ 5% ಬಡ್ಡಿಯಂತೆ ₹2,17,47,78,375 ಪಾವತಿಸಬೇಕು ಮತ್ತು ದಾವೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು ಎಂದು ಮೊಬಿಗೆ ನಿರ್ದೇಶಿಸಿತು.