Somnath Bharti and Bansuri Swaraj Facebook
ಸುದ್ದಿಗಳು

ಸಂಸದೆ ಬಾನ್ಸುರಿ ಸ್ವರಾಜ್ ಆಯ್ಕೆ ಪ್ರಶ್ನಿಸಿದ್ದ ಅರ್ಜಿ: ದೆಹಲಿ ಹೈಕೋರ್ಟ್ ನೋಟಿಸ್

ಸ್ವರಾಜ್ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಮುನ್ನ ಮತದಾರರಿಗೆ ಹಣ, ಸೀರೆ ಸೂಟ್-ಸಲ್ವಾರ್‌ ರೀತಿಯ ವಸ್ತುಗಳನ್ನು ವಿತರಿಸಿದ್ದರು ಎಂದು ಭಾರ್ತಿ ದೂರಿದ್ದರು.

Bar & Bench

ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ನಾಯಕಿ ದಿವಂಗತ ಸುಷ್ಮ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಆಯ್ಕೆ ಪ್ರಶ್ನಿಸಿ ಎಎಪಿ ನಾಯಕ ಸೋಮನಾಥ್ ಭಾರ್ತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಂಸದೆ ಬಾನ್ಸುರಿ ಅವರಿಗೆ ದೆಹಲಿ ಹೈಕೋರ್ಟ್‌ ಬುಧವಾರ ನೋಟಿಸ್‌ ನೀಡಿದೆ [ಸೋಮನಾಥ್‌ ಭಾರ್ತಿ ಮತ್ತು ಬಾನ್ಸುರಿ ಸ್ವರಾಜ್‌ ಇನ್ನಿತರರ ನಡುವಣ ಪ್ರಕರಣ].

ಮನವಿಗೆ 30 ದಿನಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಬಾನ್ಸುರಿ ಅವರಿಗೆ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ  ಆದೇಶಿಸಿದ್ದಾರೆ.

ಆದರೆ ಬಾನ್ಸುರಿ ಗೆಲುವಿಗೆ ಬಿಎಸ್‌ಪಿ ಅಭ್ಯರ್ಥಿಯೂ ಪರೋಕ್ಷವಾಗಿ ಕಾರಣ ಎಂಬ ಭಾರ್ತಿ ಅವರ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಬಿಎಸ್‌ಪಿ ಅಭ್ಯರ್ಥಿ ರಾಜ್‌ಕುಮಾರ್‌ ಆನಂದ್‌ ಅವರು ಕೇವಲ 5,000 ಮತ ಪಡೆದಿದ್ದು ಅವರ ಗೆಲುವು ಫಲಿತಾಂಶದ ಮೇಲೆ ಪರಿಣಾಮ ಬೀರಿಲ್ಲ ಎಂದು ತಿಳಿಸಿ ಅವರನ್ನು ಪ್ರತಿವಾದಿಗಳ ಪಟ್ಟಿಯಿಂದ ಕೈಬಿಟ್ಟಿತು.

ಇದೇ ವೇಳೆ, ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಮತದಾರರಿಂದ ಪರಿಶೀಲಿಸಿದ ಪೇಪರ್ ಆಡಿಟ್ ಟ್ರೈಲ್‌ಗಳ (ವಿವಿಪಿಎಟಿ) ಮಾಹಿತಿ ಕುರಿತಂತೆ ಚುನಾವಣಾಧಿಕಾರಿಯ ವಾದವನ್ನು ಆಗಸ್ಟ್ 20 ರಂದು ಆಲಿಸುವುದಾಗಿ ನ್ಯಾಯಾಲಯ ಹೇಳಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾನ್ಸುರಿ ಅವರು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಭಾರ್ತಿ ಅವರನ್ನು ಮಣಿಸಿದ್ದರು. ರಾಜಧಾನಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.