Delhi High Court Bar Association, Delhi High Court  
ಸುದ್ದಿಗಳು

ಡಿಎಚ್‌ಸಿಬಿಎ ಚುನಾವಣೆ ಅಬಾಧಿತ: ಇವಿಎಂ ಖರೀದಿಗಾಗಿ ಮಾತುಕತೆ ನಡೆಸಲಾಗುವುದು ಎಂದು ದೆಹಲಿ ಹೈಕೋರ್ಟ್‌ಗೆ ಮಾಹಿತಿ

ಚುನಾವಣೆಗಾಗಿ ಇವಿಎಂಗಳನ್ನು ಖರೀದಿಸಲು ಭಾರತೀಯ ಚುನಾವಣಾ ಆಯೋಗ ಮತ್ತು ದೆಹಲಿ ವಿಶ್ವವಿದ್ಯಾಲಯದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಡಿಎಚ್‌ಸಿಬಿಎ ಚುನಾವಣಾ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ.

Bar & Bench

ಚುನಾವಣಾ ಮತಯಂತ್ರ (ಇವಿಎಂ) ಅಲಭ್ಯತೆ ಕಾರಣಕ್ಕೆ ಚುನಾವಣೆ ಮುಂದೂಡುವ ನಿರ್ಧಾರ ಕೈಬಿಡಲಾಗಿದೆ ಎಂದು ದೆಹಲಿ ಹೈಕೋರ್ಟ್‌ ವಕೀಲರ ಸಂಘದ (ಡಿಎಚ್‌ಸಿಬಿಎ) ಚುನಾವಣಾ ಆಯೋಗ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದು ನಿಗದಿಯಂತೆ ಚುನಾವಣೆ ನಡೆಯಲಿದೆ.

ಒಂದು ವಾರ ಕಾಲ ನಿರ್ಧಾರ ಅಮಾನತಿನಲ್ಲಿರುತ್ತದೆ ಎಂದು ಆಯೋಗ ತಿಳಿಸಿದೆ. ಆದರೆ, ನಾಮಪತ್ರಗಳು ಇನ್ನೂ ಮುದ್ರಿತವಾಗದ ಕಾರಣ ಈ ಹಿಂದೆ ನಿಗದಿಪಡಿಸಿದಂತೆ ಸೋಮವಾರದ ಬದಲು ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ನ್ಯಾ., ಸಂಜೀವ್‌ ನರುಲಾ ಅವರಿದ್ದ ಏಕಸದಸ್ಯ ಪೀಠದೆದುರು ಚುನಾವಣಾ ಆಯೋಗ ಈ ವಿಚಾರ ತಿಳಿಸಿತು. ಇವಿಎಂಗಳ ಲಭ್ಯತೆಯಿಲ್ಲದ ಕಾರಣ ಸಂಘದ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಆಯೋಗದ ನಿರ್ಧಾರ ಪ್ರಶ್ನಿಸಿ ಸಂಘ ಮತ್ತು ವಕೀಲ ಸುಕೃತ್‌ ಗುಪ್ತಾ ಅವರು ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಇಂದು ಬೆಳಿಗ್ಗೆ ಪ್ರಕರಣದ ವಿಚಾರಣೆ ನಡೆದಾಗ ಚುನಾವಣೆ ಮುಂದೂಡುವುದು ಒಳಿತೆ ಎಂಬ ಬಗ್ಗೆ ತನ್ನ ಸದಸ್ಯರನ್ನು ಕೇಳುವಂತೆ ಆಯೋಗಕ್ಕೆ ನ್ಯಾಯಮೂರ್ತಿಗಳು ಸಲಹೆ ನೀಡಿದ್ದರು. ಊಟದ ನಂತರದ ಅಧಿವೇಶನದಲ್ಲಿ ತನ್ನ ಆದೇಶ ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಚುನಾವಣಾ ಆಯೋಗ ಹೈಕೋರ್ಟ್‌ಗೆ ತಿಳಿಸಿತು. ಚುನಾವಣೆಗಾಗಿ ಇವಿಎಂಗಳನ್ನು ಖರೀದಿಸಲು ಭಾರತೀಯ ಚುನಾವಣಾ ಆಯೋಗ ಮತ್ತು ದೆಹಲಿ ವಿಶ್ವವಿದ್ಯಾಲಯದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅದು ವಿವರಿಸಿತು.