Delhi High Court 
ಸುದ್ದಿಗಳು

ಯುಎಪಿಎ ಪ್ರಕರಣ: ಪಿಎಫ್ಐ ಮುಖ್ಯಸ್ಥ ಅಬೂಬಕರ್‌ಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಕಾರ

ಪಿಎಫ್ಐ ಮೇಲೆ 2022ರಲ್ಲಿ ನಿಷೇಧ ವಿಧಿಸಿದ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಬೂಬಕರ್ ಅವರನ್ನು ಬಂಧಿಸಿತ್ತು.

Bar & Bench

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖ್ಯಸ್ಥ ಇ ಅಬೂಬಕರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಕೇಂದ್ರ ಸರ್ಕಾರವು ಪಿಎಫ್‌ಐ ಮೇಲೆ 2022ರಲ್ಲಿ ನಿಷೇಧ ವಿಧಿಸಿತ್ತು. ಐಸಿಸ್‌ ಸೇರಿದಂತೆ ಜಾಗತಿಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆಪಾದನೆಯನ್ನು ಪಿಎಫ್‌ಐ ವಿರುದ್ಧ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪಿಎಫ್‌ಐ ಸಂಘಟನೆಯ ಕಚೇರಿಗಳು, ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ವಿವಿಧ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಇದೇ ವೇಳೆ ಪಿಎಫ್‌ಐ ಮುಖ್ಯಸ್ಥ ಅಬೂಬಕರ್ ಅವರನ್ನು ಬಂಧಿಸಲಾಗಿತ್ತು.

ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಪುದುಚೆರಿ, ದೆಹಲಿ, ರಾಜಸ್ಥಾನಗಳಲ್ಲಿ ಪಿಎಫ್‌ಐ ವಿರುದ್ಧ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು.

ಪಿಎಫ್‌ಐ ಹಾಗೂ ಅದರ ಸದಸ್ಯರು ಮತ್ತು ಪದಾಧಿಕಾರಿಗಳು ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಹಣ ಸಂಗ್ರಹಿಸುವ ಕ್ರಿಮಿನಲ್‌ ಸಂಚು ರೂಪಿಸಿದ್ದಾರೆ. ಈ ಉದ್ದೇಶಕ್ಕಾಗಿ ಕಾರ್ಯಕರ್ತರಿಗೆ ತರಬೇತಿ ನೀಡಲು ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದು ಎನ್‌ಐಎ ಆರೋಪಿಸಿತ್ತು. ಆದರೆ ಯುಎಪಿಎ ಅಡಿಯಲ್ಲಿ ತನ್ನ ವಿರುದ್ಧ ಎನ್‌ಐಎ ಪ್ರಕರಣ ಹೂಡಲು ಯಾವುದೇ ಆಧಾರವಿಲ್ಲ ಎಂದು ಅಬೂಬಕರ್‌ ಪ್ರತಿಪಾದಿಸಿದ್ದರು.