Delhi HC and Satyendar Jain
Delhi HC and Satyendar Jain  
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸತ್ಯೇಂದರ್ ಜೈನ್‌ಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಕಾರ

Bar & Bench

ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಂಪುಟದ ಮಾಜಿ ಸಚಿವ ಮತ್ತು ಎಎಪಿಯ ಹಿರಿಯ ನಾಯಕ ಸತ್ಯೇಂದರ್ ಜೈನ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ನಿರಾಕರಿಸಿದೆ.

ಜೈನ್ ಪ್ರಭಾವಿ ವ್ಯಕ್ತಿಯಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಜಾಮೀನು ನೀಡಿಕೆಗೆ ಅಗತ್ಯವಾದ ಅವಳಿ ಷರತ್ತುಗಳನ್ನು ಪೂರೈಸಿದ್ದಾರೆ ಎಂದು ಹೇಳಲಾಗದು. ವಿಚಾರಣಾ ನ್ಯಾಯಾಲಯವು ನೀಡಿರುವ ಆದೇಶವು ದೋಷರಹಿತವಾಗಿದೆ. ಅವರು ಸಾಕ್ಷ್ಯ  ಹಾಳು ಮಾಡುವ ಸಾಧ್ಯತೆಗಳಿವೆ ಎಂಬುದಾಗಿ ನ್ಯಾ. ದಿನೇಶ್ ಕುಮಾರ್ ಶರ್ಮಾ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 22 ರಂದು ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.

ಜೈನ್ ಅವರನ್ನು  ಜಾರಿ ನಿರ್ದೇಶನಾಲಯ ಮೇ 2022ರಲ್ಲಿ ಬಂಧಿಸಿತ್ತು. ವಿಚಾರಣಾ ನ್ಯಾಯಾಲಯ ನವೆಂಬರ್ 17, 2022 ರಂದು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಅವರು ಹೈಕೋರ್ಟ್‌ನಲ್ಲಿ ಈ ಆದೇಶ ಪ್ರಶ್ನಿಸಿದ್ದರು.

ಆರಂಭದಲ್ಲಿ ಸಿಬಿಐ ಕೂಡ ಜೈನ್‌ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ ಸೆಕ್ಷನ್ 13(2) (ಸಾರ್ವಜನಿಕರ ಸೇವೆಯಲ್ಲಿರುವವರು ಎಸಗುವ ದುಷ್ಕೃತ್ಯ) 13 (ಅಸಮ ಆಸ್ತಿ) ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.