Delhi High Court 
ಸುದ್ದಿಗಳು

ಇಂಡಿಯಾ ಬುಲ್ಸ್‌ ಜೊತೆಗಿನ ವಿವಾದ: ಆಂಬಿಯನ್ಸ್‌ ಸಮೂಹಕ್ಕೆ ₹638 ಕೋಟಿ ಠೇವಣಿ ಇಡಲು ನಿರ್ದೇಶಿಸಿದ ದೆಹಲಿ ಹೈಕೋರ್ಟ್‌

2020ರಲ್ಲಿ ಆಂಬಿಯನ್ಸ್‌ ಪ್ರಾಜೆಕ್ಟ್ಸ್‌ ಜೊತೆಗೆ ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಮಾರಾಟ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಆಂಬಿಯನ್ಸ್‌ ಸಂಸ್ಥೆಯು 273 ಮನೆಗಳ ಮಾಲೀಕತ್ವವನ್ನು ಇಂಡಿಯಾ ಬುಲ್ಸ್‌ಗೆ ವರ್ಗಾಯಿಸಲು ವಿಫಲವಾಗಿತ್ತು.

Bar & Bench

ಮಾರಾಟ ಒಪ್ಪಂದ ಪ್ರಕಾರ ಇಂಡಿಯಾ ಬುಲ್ಸ್‌ಗೆ ನಿಗದಿತ ಕಾಲಾವಧಿಯಲ್ಲಿ ಕ್ರಯಪತ್ರ ಮಾಡಿಕೊಡಲು ವಿಫಲವಾಗಿರುವುದರಿಂದ ₹638 ಕೋಟಿಯನ್ನು ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಒಂದು ತಿಂಗಳಲ್ಲಿ ಠೇವಣಿ ಇಡಲು ಆಂಬಿಯನ್ಸ್‌ ಪ್ರೈವೇಟ್‌ ಲಿಮಿಟೆಡ್‌ ರಿಯಲ್‌ ಎಸ್ಟೇಟ್‌ ಸಂಸ್ಥೆಗೆ ದೆಹಲಿ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಇಂಡಿಯಾ ಬುಲ್ಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಹರಿಶಂಕರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ವಿವಾದಿತ ಘಟಕಗಳಿಗೆ (ಅಪಾರ್ಟ್‌ಮೆಂಟ್‌ಗಳು) ಸಂಬಂಧಿಸಿದಂತೆ ಯಾವುದೇ ಮೂರನೇ ವ್ಯಕ್ತಿ ಹಕ್ಕುಗಳನ್ನು ಸೃಜಿಸದಂತೆ ಆಂಬಿಯನ್ಸ್‌ಗೆ ನಿರ್ಬಂಧ ವಿಧಿಸಲಾಗಿದೆ. ಮೇಲೆ ಸೂಚಿಸಿದಂತೆ ಮೊತ್ತವನ್ನು ಠೇವಣಿ ಇಟ್ಟ ಬಳಿಕ ವಿವಾದಿತ ಘಟಕಕ್ಕೆ ಸಂಬಂಧಿಸಿದಂತೆ ನಿರ್ಬಂಧ ಆದೇಶವು ತೆರವಾಗಲಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಮನೆಗಳನ್ನು ಮಾರಾಟ ಮಾಡಿದ್ದರೆ ಇಂಡಿಯಾ ಬುಲ್ಸ್‌ ನೀಡಿರುವ ಹಣ ಹಿಂಪಡೆಯಲು ಇಂಡಿಯಾ ಬುಲ್ಸ್‌ ಹಕ್ಕು ಹೊಂದಿರುತ್ತದೆ ಎಂದು ಆಂಬಿಯನ್ಸ್‌ ವಾದಿಸಿತ್ತು.

ಇಂಡಿಯಾ ಬುಲ್ಸ್‌ ₹638.08 ಕೋಟಿ ನೀಡಿದ್ದರೂ ಆಂಬಿಯನ್ಸ್‌ ಮನೆಗಳ ಹಕ್ಕುಗಳನ್ನು ವರ್ಗಾಯಿಸಲು ವಿಫಲವಾಗಿತ್ತು. ಪ್ರಕರಣವು ಮಧ್ಯಸ್ಥಿಕೆಯಲ್ಲಿ ಬಾಕಿ ಇರುವಾಗ ಇಂಡಿಯಾ ಬುಲ್ಸ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. 

ವಿವಾದಿತ ಘಟಕಗಳನ್ನು ಪ್ರತ್ಯೇಕಗೊಳಿಸದಿರಲು ಆಂಬಿಯನ್ಸ್‌ ನೀಡಿರುವ ಮುಚ್ಚಳಿಕೆಯು ಇಂಡಿಯಾಬುಲ್ಸ್‌ಗೆ ಭದ್ರತೆಯನ್ನು ಒದಗಿಸುತ್ತದೆ ಎನ್ನುವ ವಾದವನ್ನು ನ್ಯಾಯಾಲಯವು ಪರಿಗಣಿಸಿತು.

ಆಂಬಿಯನ್ಸ್‌ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿರುವಂತೆ ಒಂದೊಮ್ಮೆ ಕ್ರಯಪತ್ರ ಮಾಡಿಕೊಡುವಲ್ಲಿ ವಿಫಲವಾದರೆ ತನ್ನ ಹಣವನ್ನು ಮರಳಿ ಪಡೆಯಲು ಇಂಡಿಯಾಬುಲ್ಸ್‌ ಹಕ್ಕು ಹೊಂದಿರುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಒಂದೇ ಒಂದು ಕ್ರಯಪತ್ರವನ್ನು ಮಾಡಿಕೊಡದೆ ಇರುವ ಆಂಬಿಯನ್ಸ್‌ಗೆ ಇಂಡಿಯಾಬುಲ್ಸ್‌ನ ಹಣವನ್ನು ಇರಿಸಿಕೊಳ್ಳುವ ಕಾನೂನಾತ್ಮಕ ಹಕ್ಕಾಗಲಿ, ನೈತಿಕ ಹಕ್ಕಾಗಲಿ ಇಲ್ಲ ಎಂದು ಅದು ತನ್ನ ಆದೇಶದಲ್ಲಿ ಹೇಳಿತು.