Lawyers in Delhi 
ಸುದ್ದಿಗಳು

ದಾವೆದಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸುವುದನ್ನು ಖಾತರಿಪಡಿಸಲು ಗ್ರಾಹಕ ಆಯೋಗಕ್ಕೆ ದೆಹಲಿ ಹೈಕೋರ್ಟ್‌ ನಿರ್ದೇಶನ

ವಕೀಲೇತರರು ವಾದಿಸಲು ಅನುಮತಿಸುವುದು ವಕೀಲರ ಕಾಯಿದೆಯ ಅಡಿ ಕಾನೂನಾತ್ಮಕ ಮತ್ತು ನೈತಿಕ ಜವಾಬ್ದಾರಿಗಳನ್ನು ಬದಿಗೆ ಸರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಗ್ರಾಹಕರ ಆಯೋಗದಲ್ಲಿ ದಾವೆದಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸುವುದನ್ನು ಖಾತರಿಪಡಿಸುವಂತೆ ದೆಹಲಿ ಹೈಕೋರ್ಟ್‌ ಈಚೆಗೆ ದೆಹಲಿ ಗ್ರಾಹಕರ ಆಯೋಗಕ್ಕೆ ನಿರ್ದೇಶಿಸಿದೆ.

ಸೂಕ್ತ ಅನುಮತಿ ಇಲ್ಲದೇ ಮತ್ತು ಗ್ರಾಹಕರ ರಕ್ಷಣಾ ನಿಬಂಧನೆಗಳು ಮತ್ತು ವಕೀಲರ ಕಾಯಿದೆಗೆ ವಿರುದ್ಧವಾಗಿ ವಕೀಲೇತರರು ವ್ಯಾಪಕವಾಗಿ ಗ್ರಾಹಕರ ಆಯೋಗದಲ್ಲಿ ವಾದಿಸುತ್ತಿದ್ದಾರೆ ಎಂದು ಆಕ್ಷೇಪಿಸಿ ವಕೀಲರುಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್‌ ನರುಲಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ದೆಹಲಿಯಲ್ಲಿನ ಎಲ್ಲಾ ಗ್ರಾಹಕರ ಆಯೋಗಗಳು ಪಕ್ಷಕಾರರನ್ನು ವಕೀಲರು ಅಥವಾ ಅವರ ಏಜೆಂಟರು/ಪ್ರತಿನಿಧಿಗಳು/ವಕೀಲೇತರರು ನಿಬಂಧನೆಗಳಿಗೆ ಅನುಗುಣವಾಗಿ ಪ್ರತಿನಿಧಿಸುವುದನ್ನು ಖಾತರಿಪಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ವಕೀಲರು ನೀಡುವ ಅಧಿಕಾರ ಪತ್ರಗಳ ಆಧಾರದ ಮೇಲೆ ವಕೀಲರಲ್ಲದವರು ಅಥವಾ ಏಜೆಂಟರುಗಳಿಗೆ ಹಾಜರಾಗಲು ಅನುಮತಿ ನೀಡುವ ಅಭ್ಯಾಸವನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೇ, ಭಾರತೀಯ ವಕೀಲರ ಪರಿಷತ್‌ ಮತ್ತು ದೆಹಲಿ ವಕೀಲರ ಪರಿಷತ್‌ಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ವಕೀಲರಲ್ಲದವರು ಹಾಜರಾಗುತ್ತಿರುವ ಬಾಕಿ ಇರುವ ಪ್ರಕರಣಗಳ ಪಟ್ಟಿ ಸಲ್ಲಿಸುವಂತೆ ರಾಜ್ಯ ವಿವಾದ ಪರಿಹಾರ ಆಯೋಗ ಮತ್ತು ಜಿಲ್ಲಾ ವಿವಾದ ಪರಿಹಾರ ಆಯೋಗಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ. ವಕೀಲರಲ್ಲದವರಿಗೆ ವಾದಿಸಲು ಅವಕಾಶ ನೀಡುವುದು ವಕೀಲರ ಕಾಯಿದೆಯ ನಿಬಂಧನೆಗಳೊಂದಿಗೆ "ಮೂಲಭೂತವಾಗಿ ಅಸಮಂಜಸವಾಗಿದೆ" ಎಂದು ನ್ಯಾಯಾಲಯ ಹೇಳಿದೆ.