Vistara
Vistara 
ಸುದ್ದಿಗಳು

ವಿಸ್ತಾರ ವಿವಾದ: ಬಲವಂತದ ಕ್ರಮ ಕೈಗೊಳ್ಳದಂತೆ ಟಾಟಾ ಏರ್‌ಲೈನ್ಸ್‌, ಕನ್ನಡ ಸುದ್ದಿ ಸಂಸ್ಥೆಗೆ ದೆಹಲಿ ಹೈಕೋರ್ಟ್ ಸೂಚನೆ

Bar & Bench

ವಾಣಿಜ್ಯ ಚಿಹ್ನೆ (ಟ್ರೇಡ್‌ಮಾರ್ಕ್‌) ಉಲ್ಲಂಘನೆ ಮೊಕದ್ದಮೆಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕನ್ನಡ ಸುದ್ದಿವಾಹಿನಿ ವಿಸ್ತಾರ ಹಾಗೂ ಟಾಟಾ ಎಸ್‌ಐಎ ಏರ್‌ಲೈನ್ಸ್‌ಗೆ (ವಿಸ್ತಾರ ಏರ್‌ಲೈನ್ಸ್‌ ಮಾಲೀಕರು) ದೆಹಲಿ ಹೈಕೋರ್ಟ್‌ ಇತ್ತೀಚೆಗೆ ನಿರ್ದೇಶಿಸಿದೆ [ಟಾಟಾ ಎಸ್‌ಐಎ ಏರ್‌ಲೈನ್ಸ್‌ ಮತ್ತು ವಿಸ್ತಾರ ಮೀಡಿಯಾ ಪ್ರೈ ಲಿಮಿಟೆಡ್‌ ನಡುವಣ ಪ್ರಕರಣ].

ನವೆಂಬರ್ 22 ರಂದು, ನ್ಯಾ, ಜ್ಯೋತಿ ಸಿಂಗ್ ಅವರು ವಿಸ್ತಾರ ವಾಣಿಜ್ಯ ಚಿಹ್ನೆ ಅನ್ನು ಬಳಸದಂತೆ ಕನ್ನಡ ಸುದ್ದಿ ಸಂಸ್ಥೆಗೆ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿದ್ದರು. ಇದನ್ನು ವಿರೋಧಿಸಿ ವಿಸ್ತಾರ ಸುದ್ದಿ ವಾಹಿನಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಈ ಸಂಬಂಧ ಶುಕ್ರವಾರ ಆದೇಶ ನೀಡಿರುವ ನ್ಯಾ. ಅಮಿತ್‌ ಬನ್ಸಾಲ್‌ ಡಿಸೆಂಬರ್ 15 ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆ.

"ನೋಟಿಸ್ ನೀಡಿ... ಪೂರ್ವಗ್ರಹವಿಲ್ಲದೆ ಕಕ್ಷಿದಾರರ ಹಕ್ಕುಗಳು ಮತ್ತು ವ್ಯಾಜ್ಯ ವಿಚಾರಗಳಿಗೆ ಧಕ್ಕೆಯಾಗದಂತೆ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಎರಡೂ ಕಡೆಯವರು ಯಾವುದೇ ಒತ್ತಾಯಪೂರ್ವಕ ಕ್ರಮಕ್ಕೆ ಮುಂದಾಗಬಾರದು ಎಂದು ವಕೀಲರ ನಡುವೆ ಒಮ್ಮತ ಮೂಡಿದೆ" ಎಂದು ನ್ಯಾಯಾಲಯ ಆದೇಶಿಸಿದೆ.

ವಿಸ್ತಾರ ವಾಣಿಜ್ಯ ಚಿಹ್ನೆಯ ನೋಂದಾಯಿತ ಮಾಲೀಕ ತಾನಾಗಿದ್ದು ತನಗೆ ಮಾತ್ರ ಅದನ್ನ ಬಳಸುವ ಹಕ್ಕು ಇದ್ದು ಅದನ್ನು ಬೇರೆಯವರು ಬಳಸುವಂತಿಲ್ಲ ಎಂದು ಟಾಟಾ ಎಸ್‌ಐಎ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಸಿದ್ಧ ವಾಣಿಜ್ಯ ಚಿಹ್ನೆ ಎಂದು ಘೋಷಿಸಲಾದ ವಿಸ್ತಾರ ಉನ್ನತ ಮಟ್ಟದ ರಕ್ಷಣೆಗೆ ಅರ್ಹ ಎಂದು ತಿಳಿಸಲಾಗಿತ್ತು.

ಪ್ರತಿವಾದಿಯಾಗಿರುವ ವಿಸ್ತಾರ ಕನ್ನಡ ಸುದ್ದಿವಾಹಿನಿ ವಾಣಿಜ್ಯ ಚಿನ್ಹೆಯನ್ನು ಅಪ್ರಾಮಣಿಕ ರೀತಿಯಲ್ಲಿ ನಕಲು ಮಾಡಿದ್ದಾರೆ. ಅದನ್ನು ಅಳವಡಿಸಿಕೊಳ್ಳಲು ಅವರಿಗೆ ಯಾವುದೇ ಸಮರ್ಥನೀಯ ಕಾರಣ ಇಲ್ಲ ಎಂದು ದೂರಲಾಗಿತ್ತು.

ಸುದ್ದಿವಾಹಿನಿ ನೀಡುತ್ತಿರುವ ಸೇವೆ ಮತ್ತು ಪ್ಯಾಕೇಜ್‌ಗಳು ಫಿರ್ಯಾದಿಯಿಂದ ಮೂಡಿವೆ ಎಂದು ಗ್ರಾಹಕರು ನಂಬುವಂತೆ ಅವರನ್ನು ಗೊಂದಲಗೊಳಿಸುವುದು ಇದರ ಉದ್ದೇಶ ಎಂದು ಮೊಕದ್ದಮೆಯಲ್ಲಿ ವಿವರಿಸಲಾಗಿತ್ತು.

ಅದರಂತೆ, ನವೆಂಬರ್ 22 ರಂದು, ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು  ಪ್ರಯೋಜನಗಳ ಸಂತುಲಿತತೆಯನ್ನು ಪರಿಗಣಿಸಿದಲ್ಲಿ ಅದು ಫಿರ್ಯಾದಿ (ಟಾಟಾ ಎಸ್‌ಐಎ) ಪರವಾಗಿದ್ದು, ಪ್ರತಿಬಂಧಕಾದೇಶ ಮಾಡದಿದ್ದರೆ ಫಿರ್ಯಾದಿಗೆ ಸರಿಪಡಿಸಲಾಗದ ಸಮಸ್ಯೆಯಾಗಲಿದೆ ಎಂದು ತಿಳಿಸಿ ಮಧ್ಯಂತರ ಪ್ರತಿಬಂಧಕಾದೇಶ ಜಾರಿ ಮಾಡಿದ್ದರು.

ಹೀಗಾಗಿ, “ಮುಂದಿನ ವಿಚಾರಣೆಯವರೆಗೆ ಪ್ರತಿವಾದಿಗಳು ಮತ್ತು ಸಂಬಂಧಿತರು ಯಾವುದೇ ಕಾರಣಕ್ಕೂ ಪ್ರಾದೇಶಿಕ ಭಾಷೆ ಕನ್ನಡ ಸೇರಿದಂತೆ ಎಲ್ಲಿಯೂ ʼವಿಸ್ತಾರʼ ಟ್ರೇಡ್‌ಮಾರ್ಕ್‌ ಬಳಸದಂತೆ ಹಾಗೂ ಫಿರ್ಯಾದಿಯ ಸೇವೆ ಅಥವಾ ಉತ್ಪನ್ನ ಒದಗಿಸದಂತೆ ನಿರ್ಬಂಧಿಸಲಾಗಿದೆ. ಅಲ್ಲದೇ, ತಕ್ಷಣದಿಂದಲೇ www.vistaranews.com ವೆಬ್‌ಸೈಟ್‌ ನಿರ್ಬಂಧಿಸಲು ಪ್ರತಿವಾದಿಗಳಿಗೆ ಆದೇಶಿಸಲಾಗಿದೆ” ಎಂದು ಪೀಠ ಹೇಳಿತ್ತು.

ಟಾಟಾ ಏರ್‌ಲೈನ್ಸ್ ಪರ ವಕೀಲರಾದ ಪ್ರವೀಣ್ ಆನಂದ್, ಅಚ್ಯುತನ್ ಶ್ರೀಕುಮಾರ್ ಮತ್ತು ರೋಹಿಲ್ ಬನ್ಸಾಲ್ ಅವರು ವಾದ ಮಂಡಿಸಿದ್ದರು. ವಿಸ್ತಾರ ಕನ್ನಡ ಸುದ್ದಿ ವಾಹಿನಿಯನ್ನು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ವಕೀಲರಾದ ಹಿಮಾ ಲಾರೆನ್ಸ್, ವಿಕ್ರಮ್ ಹೆಗ್ಡೆ, ಅಮಿತ್ ಭಂಡಾರಿ, ಸಿದ್ಧಾರ್ಥ್ ಸೀಮ್, ಶಿರೀಷ್ ಕೃಷ್ಣ, ಅಭಿನವ್ ಹಂಸರಾಮನ್ ಮತ್ತು ಜಾಗೃತ್ ವ್ಯಾಸ್ ಅವರು ಪ್ರತಿನಿಧಿಸಿದ್ದರು.