Delhi High Court 
ಸುದ್ದಿಗಳು

ಕೃಷ್ಣಾ- ಗೋದಾವರಿ ನದಿ ಮುಖಜ ಪ್ರದೇಶದಿಂದ ಅನಿಲ ಹೊರತೆಗೆವ ವ್ಯಾಜ್ಯ: ಕೇಂದ್ರದ ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ವ್ಯಾಜ್ಯದ ವಿಚಾರಣೆ ನಡೆಸುತ್ತಿರುವ ಇಬ್ಬರು ಮಧ್ಯಸ್ಥಿಕೆದಾರರು ಸರ್ಕಾರದ ವಿರುದ್ಧ ಪಕ್ಷಪಾತದ ನಿಲುವು ಹೊಂದಿದ್ದಾರೆ ಎಂದು ಆರೋಪಿಸಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೈಕೋರ್ಟ್ಗೆ ಮನವಿ ಸಲ್ಲಿಸಿತ್ತು.

Bar & Bench

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ವಿರುದ್ಧ ಮಧ್ಯಸ್ಥಿಕೆ ಪ್ರಕ್ರಿಯೆ ನಡೆಸುತ್ತಿರುವ ಮೂವರು ಮಧ್ಯಸ್ಥಗಾರರಲ್ಲಿ ಇಬ್ಬರನ್ನು ತೆಗೆದುಹಾಕುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾರ್ಹತೆಯ ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. [ಭಾರತ ಒಕ್ಕೂಟ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಆರ್‌ಐಎಲ್‌ನ ಕೆಜಿ-ಡಿ6 (ಕೃಷ್ಣಾ ಗೋದಾವರಿ- ಧೀರೂಬಾಯಿ 6) ಅನಿಲ ಬ್ಲಾಕ್‌ನ ದಂಡ ವಸೂಲಾತಿ ವ್ಯಾಜ್ಯದ ವಿಚಾರಣೆ ನಡೆಸುತ್ತಿರುವ ಇಬ್ಬರು ಮಧ್ಯಸ್ಥಗಾರರಾದ  ಅಧ್ಯಕ್ಷ ಸರ್ ಮೈಕೆಲ್ ಡಿ ಕಿರ್ಬಿ ಮತ್ತು ಸರ್ ಬರ್ನಾರ್ಡ್ ರಿಕ್ಸ್ ಅವರು ಪಕ್ಷಪಾತಿಯಾಗಿದ್ದಾರೆ. ಹೀಗಾಗಿ ಅವರನ್ನು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲದ ಡಿ ಜ್ಯೂರ್‌ ಅಥವಾ ಡಿ ಫ್ಯಾಕ್ಟೋ ಎಂದು ಪರಿಗಣಿಸಬೇಕೆಂದು ಕೋರಿ  ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೈಕೋರ್ಟ್‌ ಮೊರೆ ಹೋಗಿತ್ತು.  

ಆ ಕುರಿತ ಅರ್ಜಿಯು ಈಗಾಗಲೇ ಮಧ್ಯಸ್ಥಿಕೆ ನ್ಯಾಯಮಂಡಳಿಯ ಮುಂದೆ ಬಾಕಿ ಉಳಿದಿದ್ದರೂ ಕೂಡ ಸರ್ಕಾರ “ಒಮ್ಮೆ ಪಕ್ಷಪಾತದ ಆರೋಪ ಅಥವಾ ಸಮರ್ಥನೀಯ ಸಂಶಯ ಮೂಡಿದರೆ ಆ ಆರೋಪ ಮಾಡಿರುವ ಪಕ್ಷಕಾರರು ಪ್ರಕರಣದಲ್ಲಿ ಸಂಪೂರ್ಣ ಅಸಮವಾಗಿ ತೀರ್ಪು ಪಡೆಯುತ್ತಾರೆ ಎಂದು ಸರ್ಕಾರ ವಾದಿಸಿತು.

ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆಯ ಸೆಕ್ಷನ್ 12 (3) ರಲ್ಲಿ ನಮೂದಿಸಲಾದ ಆಧಾರದ ಮೇಲೆ ಮಧ್ಯಸ್ಥಿಕೆದಾರರಿಗೆಗೆ ಸವಾಲು ಹಾಕುವುದು ಕಾಯಿದೆಯ ಸೆಕ್ಷನ್ 13 ರಲ್ಲಿ ನಿಗದಿಪಡಿಸಿದ ಕಾರ್ಯವಿಧಾನದಂತೆ ನಡೆಯಬೇಕು ಎಂದು ಆರ್‌ಐಎಲ್‌ ಪ್ರಾಥಮಿಕ ಆಕ್ಷೇಪಣೆ ಎತ್ತಿತ್ತು. ಮಧ್ಯಸ್ಥಿಕೆದಾರರ ಹುದ್ದೆಯಿಂದ ಹಿಂದೆ ಸರಿಯಲು ವಿಫಲವಾದರೆ, ಮಧ್ಯಸ್ಥಿಕೆ ನ್ಯಾಯಮಂಡಳಿಯು   ಸವಾಲಿನ ಮೇಲೆ ತೀರ್ಪು ನೀಡಬೇಕಾಗುತ್ತದೆ ಎಂದು ಆ ಸೆಕ್ಷನ್‌ ಹೇಳುತ್ತದೆ.

ಆರ್‌ಐಎಲ್‌ನ ಪ್ರಾಥಮಿಕ ಆಕ್ಷೇಪಕ್ಕೆ ಸಮ್ಮತಿ ವ್ಯಕ್ತಪಡಿಸಿದ ನ್ಯಾ. ಯಶ್ವಂತ್‌ ವರ್ಮ ಅವರಿದ್ದ ಏಕಸದಸ್ಯ ಪೀಠ “ಮಧ್ಯಸ್ಥಿಕೆ ನಡೆಸುತ್ತಿರುವ ಸದಸ್ಯರು ಪ್ರಕರಣದ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದಾರೆ ಎಂಬ ವಾದದಲ್ಲಿ ಹುರುಳಿಲ್ಲ. ಕಾಯಿದೆಯ ಸೆಕ್ಷನ್ 12 ಮತ್ತು 13ರಲ್ಲಿ ಹೇಳಲಾದ ಸವಾಲಿನ ಕಾರ್ಯವಿಧಾನಕ್ಕೆ ಅನುಗುಣವಾಗಿ ಸದಸ್ಯರು ಸ್ಪಷ್ಟವಾಗಿ ವರ್ತಿಸಿದ್ದಾರೆ ಎಂದು  ತಿಳಿಸಿತು.