Plane
Plane 
ಸುದ್ದಿಗಳು

ದೇಶೀಯ ವಿಮಾನಗಳಲ್ಲಿ ಕಿರ್ಪಾನ್‌ಗೆ ಅನುಮತಿ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ದೆಹಲಿ ಹೈಕೋರ್ಟ್

Bar & Bench

ಸಿಖ್ ಪ್ರಯಾಣಿಕರಿಗೆ ದೇಶೀಯ ವಿಮಾನಗಳಲ್ಲಿ ಕಿರ್ಪಾನ್ (ಸಾಂಪ್ರದಾಯಿಕ ಬಾಕುವಿನಂತಹ ಅಸ್ತ್ರ) ಕೊಂಡೊಯ್ಯಲು ಅನುಮತಿ ನೀಡುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ [ಹರ್ಷ್ ವಿಭೋರ್ ಸಿಂಘಾಲ್ ಮತ್ತು ಭಾರತದ ಸಂಪುಟ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಇಂದು ತೀರ್ಪು ಪ್ರಕಟಿಸಿದ್ದು, ವಕೀಲ ಹರ್ಷ ವಿಭೋರ್ ಸಿಂಘಾಲ್ ಅವರ ಮನವಿಯನ್ನು ವಜಾಗೊಳಿಸಿದೆ. ಆದೇಶದ ವಿವರಗಳು ಇನ್ನಷ್ಟೇ ದೊರೆಯಬೇಕಿದೆ.

ಸಿಖ್ಖರಿಗೆ ನಾಗರಿಕ ವಿಮಾನಗಳಲ್ಲಿ ಕಿರ್ಪಾನ್‌ ಕೊಂಡೊಯ್ಯಲು ಅನುಮತಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಮಾರ್ಚ್ 4, 2022ರಂದು ಅಧಿಸೂಚನೆ ಹೊರಡಿಸಿದ್ದರು. ಇದನ್ನು ಪಿಐಎಲ್‌ ಪ್ರಶ್ನಿಸಿತ್ತು.

ಕತ್ತಿಯ ಅಲಗು ಆರು ಇಂಚು, ಒಟ್ಟು ಉದ್ದ ಒಂಬತ್ತು ಇಂಚು ಮೀರದೇ ಇರುವ ಕಿರ್ಪಾನ್‌ ಕೊಂಡೊಯ್ಯಲು ಅನುಮತಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಖ್‌ ಸಮುದಾಯದ ಸಿಬ್ಬಂದಿ ಕೂಡ ಕಿರ್ಪಾನ್‌ ಬಳಸಬಹುದು ಎಂದು ನಂತರ ಹೊರಡಿಸಿದ್ದ ಆದೇಶ ತಿಳಿಸಿತ್ತು.

ಸಿಂಘಲ್ ಅವರು “ನಾಗರಿಕ ವಿಮಾನದಲ್ಲಿ ಕಿರ್ಪಾನ್‌ಗಳ ಸಾಗಣೆಯಿಂದಾಗಿ ವಾಯುಯಾನ ಸುರಕ್ಷತೆಗೆ ಅಪಾಯ ಉಂಟಾಗಲಿದೆ. ಈ ಹಿಂದೆಯೂ ವಿಮಾನಗಳನ್ನು ಹೈಜಾಕ್ ಮಾಡಲು ಕಿರ್ಪಾನ್‌ಗಳನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಹಲವು ನಿದರ್ಶನಗಳಿವೆ. ಕಿರ್ಪಾನ್‌ಗಳನ್ನು ಬಳಸಿ 1981 ಮತ್ತು 1984ರಲ್ಲಿ ವಿಮಾನ ಅಪಹರಿಸಲಾಗಿತ್ತು. ಆ ಮೂಲಕ ಕೈದಿಗಳ ಬಿಡುಗಡೆಗೆ ಒತ್ತಡ ಹೇರಲಾಗಿತ್ತು” ಎಂದು ವಾದಿಸಿದ್ದರು.