Vivek Agnihotri, Anand Ranganathan and Swarajya Magazine 
ಸುದ್ದಿಗಳು

ನ್ಯಾಯಾಂಗ ನಿಂದನೆ: ಅಗ್ನಿಹೋತ್ರಿ, ರಂಗನಾಥನ್‌, ಸ್ವರಾಜ್ಯ ವಿರುದ್ಧ ಏಕಪಕ್ಷೀಯ ಆದೇಶ ಮಾಡಿದ ದೆಹಲಿ ಹೈಕೋರ್ಟ್‌

ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಾಖಾ ವಿರುದ್ಧದ ಆದೇಶ ಬದಿಗೆ ಸರಿಸಿ ನ್ಯಾ. ಮುರುಳೀಧರ್‌ ಅವರು ಆದೇಶ ಮಾಡಿದ್ದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಕ್ಕೆ ಪ್ರತಿವಾದಿಗಳು ನ್ಯಾಯಾಂಗ ನಿಂದನೆಗೆ ಆರೋಪಕ್ಕೆ ಗುರಿಯಾಗಿದ್ದಾರೆ.

Bar & Bench

ದೆಹಲಿ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ಎಸ್‌ ಮುರುಳೀಧರ್‌ ಅವರು ಪಕ್ಷಾಪತಿ ಎಂದು ಪ್ರತಿಕ್ರಿಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿದ್ದ ನ್ಯಾಯಾಲಯವು ವಿಜ್ಞಾನಿ ಆನಂದ್‌ ರಂಗನಾಥನ್‌, ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಹಾಗೂ ಸ್ವರಾಜ್ಯ ಮ್ಯಾಗಜೀನ್‌ ವಿರುದ್ಧ ಏಕಪಕ್ಷೀಯವಾಗಿ ಮುಂದುವರಿಯಲು ಸೋಮವಾರ ನಿರ್ಧರಿಸಿದೆ.

ಪ್ರಕರಣದ ಕುರಿತಾಗಿ ಕಳೆದ ಮೇ ತಿಂಗಳಲ್ಲಿ ಹೊಸದಾಗಿ ನೋಟಿಸ್‌ ಜಾರಿ ಮಾಡಿದರೂ ಯಾರೊಬ್ಬರೂ ಅವರ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್‌ ಮೃದುಲ್‌ ಮತ್ತು ಅಮಿತ್‌ ಶರ್ಮಾ ಅವರ ನೇತೃತ್ವದ ವಿಭಾಗೀಯ ಪೀಠವು ಆದೇಶ ಮಾಡಿದೆ.

ಕಳೆದ ಮೇನಲ್ಲೂ ಪ್ರತಿವಾದಿಗಳ ಪರವಾಗಿ ಯಾರೊಬ್ಬರೂ ಹಾಜರಾಗಿರಲಿಲ್ಲ. ನ್ಯಾಯದಾನದ ದೃಷ್ಟಿಯಿಂದ ವಿರುದ್ಧವಾದ ಆದೇಶ ಮಾಡದೇ ಮುಂದೂಡಲಾಗುತ್ತಿದೆ ಎಂದು ಪೀಠ ಹೇಳಿತ್ತು. “ನೋಟಿಸ್‌ ಜಾರಿ ಮಾಡಿದರೂ ಉಳಿದ ಪ್ರತಿವಾದಿಗಳ ಪರವಾಗಿ ಯಾರೂ ಹಾಜರಾಗಿಲ್ಲ. ಹೀಗಾಗಿ, ಅವರ ವಿರುದ್ಧ ಏಕಪಕ್ಷೀಯವಾಗಿ ಮುಂದುವರಿಯಲಾಗುತ್ತಿದೆ” ಎಂದು ಪೀಠ ಆದೇಶಿಸಿದೆ. ವಿಚಾರಣೆಯನ್ನು ಮೇ 16ಕ್ಕೆ ಮುಂದೂಡಲಾಗಿದೆ.

2018ರ ಅಕ್ಟೋಬರ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಾಖಾ ಅವರ ವಿರುದ್ಧದ ಟ್ರಾನ್ಸಿಟ್‌ ರಿಮ್ಯಾಂಡ್‌ ಆದೇಶವನ್ನು ಬದಿಗೆ ಸರಿಸಿ ನ್ಯಾ. ಮುರುಳೀಧರ್‌ ಅವರು ಆದೇಶ ಮಾಡಿದ್ದಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಸಿದ್ಧಾಂತವಾದಿ ಎಸ್‌ ಗುರುಮೂರ್ತಿ ಲೇಖನ ಬರೆದಿದ್ದರು. ದೇಶ್‌ ಕಪೂರ್‌ ಎಂಬವರು ಸದರಿ ಲೇಖನವನ್ನು ದೃಷ್ಟಿಕೋನ ಎಂಬ ಬ್ಲಾಗ್‌ನಲ್ಲಿ ಪ್ರಕಟಿಸಿದ್ದರು. ಇದನ್ನು ಗುರುಮೂರ್ತಿ, ಆನಂದ್‌ ರಂಗನಾಥನ್‌, ವಿವೇಕ್‌ ಅಗ್ನಿಹೋತ್ರಿ ಮತ್ತು ಸ್ವರಾಜ್ಯ ಮ್ಯಾಗಜೀನ್‌ ಟ್ವಿಟರ್‌ ಖಾತೆಗಳಿಂದ ರೀಟ್ವೀಟ್‌ ಮಾಡಲಾಗಿತ್ತು. ಇದನ್ನು ಉಲ್ಲೇಖಿಸಿ ಹಿರಿಯ ವಕೀಲ ರಾಜಶೇಖರ ರಾವ್‌ ಅವರು ದೆಹಲಿ ಹೈಕೋರ್ಟ್‌ ಅಂದಿನ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್‌ ಅವರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ಅವರ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿತ್ತು.

ಬೇಷರತ್‌ ಕ್ಷಮೆಯಾಚಿಸಿ ಕಪೂರ್‌ ಟ್ವೀಟ್‌ ಮಾಡಿದ್ದನ್ನು ಗುರುಮೂರ್ತಿ ರೀಟ್ವೀಟ್‌ ಮಾಡಿದ್ದರಿಂದ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು. ಉಳಿದಂತೆ ಅಗ್ನಿಹೋತ್ರಿ, ರಂಗನಾಥನ್‌ ಮತ್ತು ಇತರರ ವಿರುದ್ಧ ಪ್ರಕರಣ ಮುಂದುವರೆದಿದೆ.