PM Cares Fund with Delhi HC 
ಸುದ್ದಿಗಳು

ಪಿಎಂ ಕೇರ್ಸ್ ವಿವಾದ: ಒಂದು ಪುಟದ ಪ್ರತಿಕ್ರಿಯೆ ಸಲ್ಲಿಸಿದ ಸಂಸ್ಥೆಯ ನಡೆಗೆ ದೆಹಲಿ ಹೈಕೋರ್ಟ್ ಅಸಮಾಧಾನ

ಪ್ರಮುಖ ವಿಷಯವೊಂದಕ್ಕೆ ಸಂಬಂಧಿಸಿದಂತೆ ಪಿಎಂ ಕೇರ್ಸ್ ನಿಧಿ ಕೇವಲ ಒಂದು ಪುಟದ ಅಫಿಡವಿಟ್ ಸಲ್ಲಿಸಿರುವುದಕ್ಕೆ ಹಾಗೂ ಕೇಂದ್ರ ಸರ್ಕಾರ ಯಾವುದೇ ಅಫಿಡವಿಟ್‌ ಸಲ್ಲಿಸದಿರುವುದಕ್ಕೆ ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿದೆ.

Bar & Bench

ಸಂವಿಧಾನದ 12ನೇ ವಿಧಿಯ ಅಡಿಯಲ್ಲಿ ಪಿಎಂ ಕೇರ್ಸ್‌ ನಿಧಿಯನ್ನು 'ಪ್ರಭುತ್ವ'ದ (ಸ್ಟೇಟ್‌) ವ್ಯಾಖ್ಯಾನದೊಳಗೆ ಬರುವಂತೆ ಘೋಷಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಂಸ್ಥೆಯು (ಪಿಎಂ ಕೇರ್ಸ್‌) ಒಂದು ಪುಟದ ಅಫಿಡವಿಟ್‌ ಸಲ್ಲಿಸಿರುವುದಕ್ಕೆ ದೆಹಲಿ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) 'ವಿವರವಾದ ಮತ್ತು ಸಮಗ್ರ' ಉತ್ತರ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರ ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಅರ್ಜಿಯನ್ನು ಕಳೆದ ವರ್ಷವೇ ಸಲ್ಲಿಸಲಾಗಿದ್ದು ಅಂತಿಮ ವಾದ ಶುರುವಾಗಿದ್ದರೂ ಪಿಎಂ ಕೇರ್ಸ್‌ ಕೇವಲ ಒಂದು ಪುಟದ ಪ್ರತಿಕ್ರಿಯೆ ಸಲ್ಲಿಸಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ ಅವರು ಎತ್ತಿರುವ ವಾದಗಳ ಬಗ್ಗೆ ಅಫಿಡವಿಟ್‌ನಲ್ಲಿ ಯಾವ ಸೊಲ್ಲೂ ಇಲ್ಲ, ಸಮಸ್ಯೆ ಅಷ್ಟು ಸರಳವಾಗಿಲ್ಲ. ಸೂಕ್ತ ಪ್ರತಿಕ್ರಿಯೆ ಅಗತ್ಯ ಎಂದು ಅದು ಹೇಳಿತು.

ದಿವಾನ್‌ ಅವರು ಪ್ರಸ್ತಾಪಿಸಿದ ಪ್ರತಿ ವಿಚಾರದ ಬಗ್ಗೆ ನ್ಯಾಯಾಲಯ ಆದೇಶ ನೀಡಬೇಕಿದ್ದು ತಾನು ಯಾವುದೇ ತೀರ್ಪು ನೀಡಿದರೂ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ತಲುಪಲಿರುವ ಹಿನ್ನೆಲೆಯಲ್ಲಿ ಸೂಕ್ತ ಉತ್ತರದ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು.

ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಅವಕಾಶ ನೀಡಲಾಗಿದ್ದರೂ ಅದು ಮೌನವಾಗಿರಲು ತೀರ್ಮಾನಿಸಿದೆ. ವಿಷಯವನ್ನು ಎಳೆಯಲಯ ಅದು ಯತ್ನಿಸುತ್ತಿದೆ ಎಂದು ದಿವಾನ್‌ ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ ಪ್ರಕರಣವನ್ನು ವಿಳಂಬ ಮಾಡುತ್ತಿಲ್ಲ ನಾಲ್ಕು ವಾರಗಳಲ್ಲಿ ಕೇಂದ್ರ ವಿವರವಾದ ಪ್ರತಿಕ್ರಿಯೆ ನೀಡಲಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಿಳಿಸಿದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಸೆಪ್ಟೆಂಬರ್ 16ಕ್ಕೆ ಪ್ರಕರಣವನ್ನು ಮುಂದೂಡಿತು.

ಪಿಎಂ ಕೇರ್ಸ್ ನಿಧಿ ವಿಚಾರದಲ್ಲಿ ವಕೀಲ ಸಮ್ಯಕ್ ಗಂಗ್ವಾಲ್ ಅವರು ಸಲ್ಲಿಸಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಮೊದಲನೆಯದು ಸಂವಿಧಾನದ 12 ನೇ ವಿಧಿಯ ಪ್ರಕಾರ ನಿಧಿಯು "ಪ್ರಭುತ್ವ"ದ ವ್ಯಾಖ್ಯಾನದ ಅಡಿ ಒಳಪಡುತ್ತದೆ ಎಂದು ಘೋಷಿಸಲು ಕೋರಿದರೆ ಇನ್ನೊಂದು ಅರ್ಜಿಯು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿಯಲ್ಲಿ ನಿಧಿಯನ್ನು "ಸಾರ್ವಜನಿಕ ಪ್ರಾಧಿಕಾರ" ಎಂದು ಘೋಷಿಸುವಂತೆ ವಿನಂತಿಸಿದೆ.