Bramhastra 
ಸುದ್ದಿಗಳು

ಬ್ರಹ್ಮಾಸ್ತ್ರ ಭಾಗ ಒಂದು: ಶಿವ ಚಿತ್ರವನ್ನು ಅಕ್ರಮವಾಗಿ ಸ್ಟ್ರೀಮಿಂಗ್‌ ಮಾಡಿದ ವೆಬ್‌ಸೈಟ್‌ಗಳಿಗೆ ₹20 ಲಕ್ಷ ದಂಡ

ವಿಶೇಷವಾಗಿ ಜನಪ್ರಿಯ ಹಕ್ಕುಸ್ವಾಮ್ಯದ ವಿಷಯಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ಗಳು ಅಣಬೆಗಳಂತೆ ಹುಟ್ಟಿಕೊಕೊಂಡಿವೆ ಎಂಬುದು ಸ್ಟಾರ್ ಇಂಡಿಯಾ ಸಲ್ಲಿಸಿದ ದಾವೆಯಿಂದ ತಿಳಿದು ಬಂದಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಕೃತಿಚೌರ್ಯ ಮಾಡಿದ ಸಿನಿಮಾಗಳನ್ನು ಪ್ರದರ್ಶಿಸುವುದು ಸಿನಿಮಾ ಕ್ಷೇತ್ರದಲ್ಲಿ ನಷ್ಟಕ್ಕೆ ಬಹುದೊಡ್ಡ ಕಾರಣವಾಗಿದೆ ಎಂದು ಈಚೆಗೆ ದೆಹಲಿ ಹೈಕೋರ್ಟ್‌ ಹೇಳಿದ್ದು, 'ಬ್ರಹ್ಮಾಸ್ತ್ರ ಪಾರ್ಟ್‌ ಒನ್:‌ ಶಿವ' ಸಿನಿಮಾವನ್ನು ಅಕ್ರಮವಾಗಿ ಸ್ಟ್ರೀಮಿಂಗ್‌ ಮಾಡಿದ ಹಲವು ವೆಬ್‌ಸೈಟ್‌ಗಳಿಗೆ ₹20 ಲಕ್ಷ ದಂಡ ವಿಧಿಸಿದೆ.

ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌ ಪ್ರಧಾನ ಭೂಮಿಕೆಯಲ್ಲಿರುವ 'ಬ್ರಹ್ಮಾಸ್ತ್ರ ಪಾರ್ಟ್‌ ಒನ್: ಶಿವ' ಚಿತ್ರದ ಸ್ಟಾರ್‌ ಇಂಡಿಯಾ ಹೊಂದಿರುವ ಹಕ್ಕುಸ್ವಾಮ್ಯ ಉಲ್ಲಂಘಿಸಿದ 338 ವೆಬ್‌ಸೈಟ್‌ಗಳ ವಿರುದ್ಧ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಅವರು ಶಾಶ್ವತ ಪ್ರತಿಬಂಧಕಾದೇಶ ಮಾಡಿದ್ದಾರೆ. ಈ ಹಿಂದೆ ಕೆಲವು ವೆಬ್‌ಸೈಟ್‌ಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ.

ವಿಶೇಷವಾಗಿ ಜನಪ್ರಿಯ ಹಕ್ಕುಸ್ವಾಮ್ಯದ ವಿಷಯಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ಗಳು ಅಣಬೆಗಳಂತೆ ಹುಟ್ಟಿಕೊಕೊಂಡಿವೆ ಎಂಬುದು ಸ್ಟಾರ್ ಇಂಡಿಯಾ ಸಲ್ಲಿಸಿದ ದಾವೆಯಿಂದ ತಿಳಿದು ಬಂದಿದೆ ಎಂದು ನ್ಯಾಯಾಲಯ ಹೇಳಿದೆ.

ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಾಧಿಕಾರಗಳು ಸಾಕಷ್ಟು ಆದೇಶಗಳನ್ನು ಜಾರಿ ಮಾಡಿದ್ದು, ಹಕ್ಕುಸ್ವಾಮ್ಯ ಉಲ್ಲಂಘಿಸುವ ಈ ವೆಬ್‌ಸೈಟ್‌ಗಳನ್ನು ಹೊಂದಿರುವ ವ್ಯಕ್ತಿಗಳ ಗುರುತು ಅನಾಮಿಕವಾಗಿಯೇ ಉಳಿಯಲಿದ್ದು, ಅದು ಡೊಮೇನ್‌ ನೇಮ್‌ ರಿಜಿಸ್ಟ್ರಾರ್‌ಗಳಿಗೆ ಮಾತ್ರ ತಿಳಿದಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಕೃತಿಚೌರ್ಯ ನಿರ್ಬಂಧಿಸಲು ಚಲನಚಿತ್ರ (ತಿದ್ದುಪಡಿ) ಕಾಯಿದೆ 2023 ಅನ್ನು ಜಾರಿಗೊಳಿಸಲಾಗಿದ್ದು, ಆಗಸ್ಟ್‌ 4ರ 2023ರಂದು ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.