Asif Iqbal Tanha, Devangana Kalita, Natasha Narwal and Delhi HC 
ಸುದ್ದಿಗಳು

ದೆಹಲಿ ಗಲಭೆ ಪ್ರಕರಣ: ಆಸಿಫ್ ತನ್ಹಾ, ದೇವಾಂಗನಾ ಕಲಿತಾ, ನತಾಶಾ ನರ್ವಾಲ್‌ಗೆ ದೆಹಲಿ ಹೈಕೋರ್ಟ್ ಜಾಮೀನು

ಕಳೆದ ವರ್ಷ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗದಲ್ಲಿ ಗಲಭೆಗೆ ಪಿತೂರಿ ನಡೆಸಲಾಗಿತ್ತು ಎಂದು ದೆಹಲಿ ಪೊಲೀಸರು ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

Bar & Bench

ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ (ಯುಎಪಿಎ) ಬಂಧಿತರಾಗಿದ್ದ ಆಸಿಫ್ ಇಕ್ಬಾಲ್ ತನ್ಹಾ, ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಜೆ ಭಂಭಾನಿ ಅವರಿದ್ದ ಪೀಠ ಈ ಆದೇಶ ಪ್ರಕಟಿಸಿದೆ.

ರೂ. 50,000 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಎರಡು ಸ್ಥಳೀಯ ಶ್ಯೂರಿಟಿಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ಮೂವರೂ ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು ಮತ್ತು ಪ್ರಕರಣಕ್ಕೆ ಅಡ್ಡಿಯುಂಟುಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯ ಈಶಾನ್ಯ ಭಾಗದಲ್ಲಿ ಗಲಭೆಗೆ ಪಿತೂರಿ ನಡೆಸಲಾಗಿತ್ತು ಎಂದು ದೆಹಲಿ ಪೊಲೀಸರು ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪರ್ಷಿಯನ್‌ ಕುರಿತು ಬಿ ಎ ಆನರ್ಸ್‌ ವ್ಯಾಸಂಗ ಮಾಡುತ್ತಿದ್ದ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು 2020ರ ಮೇನಲ್ಲಿ ಬಂಧಿಸಲಾಗಿದ್ದು ಅಂದಿನಿಂದ ಅವರು ಸತತವಾಗಿ ಸೆರೆವಾಸ ಅನುಭವಿಸುತ್ತಿದ್ದಾರೆ. ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದು ಇವರು ಪಿಂಜ್ರಾತೋಡ್‌ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ. ಇವರನ್ನು ಕೂಡ 2020ರ ಮೇನಲ್ಲಿ ಬಂಧಿಸಲಾಗಿತ್ತು.

ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಾದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಈ ಮೂವರೂ ಇನ್ನಿಲ್ಲದಂತೆ ಯತ್ನಿಸಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಪಿಂಜ್ರಾ ತೋಡ್‌ ಸದಸ್ಯರು ದೆಹಲಿ ಈಶಾನ್ಯ ಭಾಗದಲ್ಲಿ ಮಹಿಳೆಯರನ್ನು ಸಜ್ಜುಗೊಳಿಸಿ ಸೀಲಾಂಪುರದ ಮದೀನಾ ಮಸೀದಿಯ ಬಳಿ 24/7 ಅವಧಿಯ ಪ್ರತಿಭಟನಾ ಸ್ಥಳ ರೂಪಿಸಿದ್ದರು. ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಅಮೆರಿಕ ಅಧ್ಯಕ್ಷರ ಭೇಟಿ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಕೋಮುಗಲಭೆ ನಡೆಸುವುದಕ್ಕಿಂತಲೂ ಮಿಗಿಲಾದ ಘಟನೆ ಇನ್ನೊಂದಿಲ್ಲ ಎಂದು ಎಣಿಸಿ ʼಚಕ್ಕಾ ಜಾಮ್‌ʼ ಏರ್ಪಡಿಸಿ ಹಿಂಸಾಚಾರ ಪ್ರಚೋದಿಸಲು ಆ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು.

ಕಲಿತಾ ಮತ್ತು ನರ್ವಾಲ್ ಪರವಾಗಿ ವಕೀಲರಾದ ಅದಿತ್ ಎಸ್ ಪೂಜಾರಿ, ತುಷಾರಿಕಾ ಮಟ್ಟೂ, ಕುನಾಲ್ ನೇಗಿ ಹಾಜರಿದ್ದರು. ತನ್ಹಾ ಪರವಾಗಿ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಅಗರ್‌ವಾಲ್, ವಕೀಲರಾದ ಸೌಜನ್ಯಾ ಶಂಕರನ್, ಸಿದ್ಧಾರ್ಥ್ ಸತಿಜಾ, ಅಭಿನವ್ ಸೆಖಾರಿ, ನಿತಿಕಾ ಖೈತಾನ್ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು, ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳಾದ ಅಮಿತ್‌ ಮಹಾಜನ್‌, ಅಮಿತ್‌ ಪ್ರಸಾದ್‌, ರಜತ್‌ ನಾಯರ್‌ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.