ED with Sandeepa Virk instagram
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಾ‌ಮಾಜಿಕ ಮಾಧ್ಯಮ ಪ್ರಭಾವಿ ಸಂದೀಪಾಗೆ ದೆಹಲಿ ಹೈಕೋರ್ಟ್ ಜಾಮೀನು

ಚಿತ್ರದಲ್ಲಿ ಪಾತ್ರ ನೀಡುವುದಾಗಿ ಹೇಳಿ ಮಹಿಳೆಗೆ ₹6 ಕೋಟಿ ವಂಚನೆ ಎಸಗಿದ ಆರೋಪ ಸಂದೀಪಾ ವಿರ್ಕ್ ಅವರ ಮೇಲಿದೆ.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿ ಸಂದೀಪಾ ವಿರ್ಕ್ ಅವರಿಗೆ ದೆಹಲಿ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿದೆ [ಸಂದೀಪಾ ವಿರ್ಕ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಚಿತ್ರದಲ್ಲಿ ಪಾತ್ರ ನೀಡುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಸುಮಾರು ₹6 ಕೋಟಿ ವಂಚಿಸಿದ ಹಾಗೂ ನಕಲಿ ಸೌಂದರ್ಯ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ ಆರೋಪ ಸಂದೀಪಾ ಅವರ ಮೇಲಿದೆ.

ಆರೋಪಿತ ವ್ಯವಹಾರ ನಡೆದ ನಂತರ ಸುಮಾರು ಒಂದು ದಶಕದ ಬಳಿಕವವಷ್ಟೇ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿ ಸ್ವರಣಕಾಂತ ಶರ್ಮಾ ಅವರು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸುವಲ್ಲಿ ಉಂಟಾದ ದೀರ್ಘ ವಿಳಂಬ ಹಾಗೂ ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದರೆ, ಸಂದೀಪಾ ವಿರ್ಕ್ ಅವರನ್ನು ಈಗಲೂ ಜೈಲಿನಲ್ಲಿ ಇರಿಸುವುದು ನ್ಯಾಯಸಮ್ಮತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಮೇಲಿನ ವಿಚಾರಗಳನ್ನು ಗಮನಿಸಿ, ಅರ್ಜಿದಾರಿಗೆ ₹2,00,000 ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಸಮಾನ ಮೊತ್ತದ ಎರಡು ಜಾಮೀನುದಾರರನ್ನು ಒದಗಿಸುವ ಷರತ್ತಿನೊಂದಿಗೆ ನಿಯಮಿತ ಜಾಮೀನು ನೀಡಲಾಗುತ್ತಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ದೂರುದಾರರು 2016ರಲ್ಲಿ ಪಂಜಾಬ್‌ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 406 ಮತ್ತು 420ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಅಮಿತ್ ಗುಪ್ತಾ ಹಾಗೂ ಸಂದೀಪಾ ವಿರ್ಕ್ ಇತರರು, ತಮ್ಮ ಕುಟುಂಬದ ಸದಸ್ಯೆಯನ್ನು ಚಿತ್ರದಲ್ಲಿ ನಾಯಕಿಯಾಗಿ ಅವಕಾಶ ನೀಡುವುದಾಗಿ ಭರವಸೆ ನೀಡಿ ಸುಮಾರು ₹6 ಕೋಟಿ ಹೂಡಿಕೆ‌ ಮಾಡುವಂತೆ ಹೇಳಿದ್ದರು ಎಂದು ದೂರುದಾರರು ಆರೋಪಿಸಿದ್ದರು.

ಇದಲ್ಲದೆ, ಸಂದೀಪಾ ವಿರ್ಕ್ ಅವರು ತಮ್ಮನ್ನು ತಪ್ಪಾಗಿ ಪರಿಚಯಿಸಿಕೊಂಡು, ಜನರು ಹಣ ಪಾವತಿಸಲು ವಂಚನೆಯಿಂದ, ಎಫ್‌ಡಿಎ ಅನುಮೋದಿತ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ಹೇಳಿದ ನಕಲಿ ಇ-ವಾಣಿಜ್ಯ ವೆಬ್‌ಸೈಟ್ hyboocare.com ಮೂಲಕ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಸಂದೀಪಾ ಅವರನ್ನು ಆಗಸ್ಟ್ 2025ರಲ್ಲಿ ಬಂಧಿಸಲಾಗಿತ್ತು.

ವಾದ ಆಲಿಸಿದ ನ್ಯಾಯಾಲಯ, ಮೂಲ ಅಪರಾಧ ಪ್ರಕರಣದಲ್ಲಿ ಪೊಲೀಸರು ಸಂದೀಪಾ ವಿರ್ಕ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿಲ್ಲ ಮತ್ತು ದೂರುದಾರರು ಖಾಸಗಿ ದೂರು ದಾಖಲಿಸಿದಾಗಲೂ ಮ್ಯಾಜಿಸ್ಟ್ರೇಟ್ ಅವರು ವಿರ್ಕ್ ಅವರಿಗೆ ಸಮನ್ಸ್ ನೀಡಿರಲಿಲ್ಲ ಎಂಬುದನ್ನು ಪರಿಗಣಿಸಿತು. ಅಲ್ಲದೆ, ಪ್ರಮುಖ ಆರೋಪಿ ದೂರುದಾರರಿಗೆ ಈಗಾಗಲೇ ಸುಮಾರು ₹2.7 ಕೋಟಿ ಹಣ ಮರುಪಾವತಿಸಿದ್ದಾರೆ ಎಂಬ ಅಂಶವನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

ಸಂದೀಪಾ ವಿರ್ಕ್ ಪರವಾಗಿ ಹಿರಿಯ ವಕೀಲ ಅನುರಾಗ್ ಅಹ್ಲುವಾಲಿಯಾ ಹಾಗೂ ವಕೀಲ ಆಶೀಷ್ ಉಪಾಧ್ಯಾಯ ಹಾಜರಿದ್ದರು.

ಜಾರಿ ನಿರ್ದೇಶನಾಲಯದ ಪರವಾಗಿ ವಕೀಲರಾದ ಸಮ್ರಾಟ್ ಗೋಸ್ವಾಮಿ ಶ್ರೀನಿವಾಸ್ ಸಿನ್ಹಾ ಹಾಗೂ ವಿವೇಕ್ ಅವರು ವಾದ ಮಂಡಿಸಿದರು.