Faiyaz Wasifuddin Dagar and AR Rahman facebook
ಸುದ್ದಿಗಳು

'ವೀರ ರಾಜ ವೀರ' ಹಾಡಿನ ಹಕ್ಕುಸ್ವಾಮ್ಯ ಪ್ರಕರಣ: ಎ ಆರ್ ರಹಮಾನ್‌ಗೆ ದೆಹಲಿ ಹೈಕೋರ್ಟ್ ಪರಿಹಾರ

ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಶಾಸ್ತ್ರೀಯ ಸಂಗೀತಗಾರ ಫೈಯಾಜ್ ವಾಸಿಫುದ್ದೀನ್ ದಾಗರ್ ಅವರು ರೆಹಮಾನ್ ವಿರುದ್ಧ ಮೊಕದ್ದಮೆ ಹೂಡಿದ್ದರು.

Bar & Bench

ತಮಿಳಿನ ಪೊನ್ನಿಯಿನ್ ಸೆಲ್ವನ್ 2 ಚಿತ್ರದ 'ವೀರ ರಾಜ ವೀರ' ಹಾಡಿನ ಸಂಯೋಜನೆಯ ಕುರಿತು ಸಲ್ಲಿಸಲಾದ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಗೆ ಸಂಬಂಧಿಸಿದಂತೆ ಸಂಗೀತ ಸಂಯೋಜಕ ಎ ಆರ್ ರಹಮಾನ್ ಅವರ ಅರ್ಜಿ ವಿರುದ್ಧ ಏಕ ಸದಸ್ಯ ಪೀಠ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ದೆಹಲಿ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ರೆಹಮಾನ್ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

"ಮೇಲ್ಮನವಿ ಪುರಸ್ಕರಿಸಿದ್ದೇವೆ. ಒಮ್ಮತಾಭಿಪ್ರಾಯದ ಮೂಲಕ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ತಾತ್ವಿಕವಾಗಿ ರದ್ದುಗೊಳಿಸಿದ್ದೇವೆ " ಎಂದು ನ್ಯಾಯಾಲಯ ಹೇಳಿದೆ.

ಆದರೆ, ತಾನು ಹಕ್ಕುಸ್ವಾಮ್ಯ ಉಲ್ಲಂಘನೆಯ ಅಂಶವನ್ನು ಪರಿಶೀಲಿಸಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.

ತನ್ನ ತಂದೆ ನಾಸಿರ್ ಫೈಯಾಜುದ್ದೀನ್ ದಾಗರ್ ಮತ್ತು ಚಿಕ್ಕಪ್ಪ ಜಹಿರುದ್ದೀನ್ ದಾಗರ್ ಸಂಯೋಜಿಸಿದ್ದ 'ಶಿವ ಸ್ತುತಿ' ಹಾಡಿನ ನಕಲು ಈ ಗೀತೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭಾರತೀಯ ಶಾಸ್ತ್ರೀಯ ಗಾಯಕ ಫೈಯಾಜ್ ವಾಸಿಫುದ್ದೀನ್ ದಾಗರ್ ಅವರು ಏಕಸದಸ್ಯ ಪೀಠಕ್ಕೆ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆ ಹೂಡಿದ್ದರು.

ಆದರೆ ಆರೋಪ ನಿರಾಕರಿಸಿದ್ದ, ರಹಮಾನ್, ಶಿವ ಸ್ತುತಿ ಧ್ರುಪದ್ ಪ್ರಕಾರದ ಸಾಂಪ್ರದಾಯಿಕ ಸಂಯೋಜನೆಯಾಗಿದ್ದು, ಇದು ಸಾರ್ವಜನಿಕವಾಗಿ ಲಭ್ಯವಿರುವ ಸಂಯೋಜನೆ ಎಂದು ಹೇಳಿದ್ದರು. ವೀರ ರಾಜ ವೀರ ಗೀತೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಪ್ರದಾಯಗಳನ್ನು ಮೀರಿದ, 227 ವಿಭಿನ್ನ ಸ್ತರದ ಪಾಶ್ಚಿಮಾತ್ಯ ಸಂಗೀತದ ಮೂಲಭೂತ ಅಂಶಗಳನ್ನು ಬಳಸಿಕೊಂಡು ರಚಿಸಲಾದ ಮೂಲ ಕೃತಿಯಾಗಿದೆ ಎಂದು ಅವರು ವಾದಿಸಿದ್ದರು.

ಏಪ್ರಿಲ್ 25 ರಂದು, ಏಕ ಸದಸ್ಯ ಪೀಠ ದಾಗರ್ ಅವರ ಪರವಾಗಿ ತೀರ್ಪು ನೀಡಿತ್ತು. ಎಲ್ಲಾ ಆನ್‌ಲೈನ್ ವೇದಿಕೆಗಳಲ್ಲಿ ದಾಗರ್ ಸಹೋದರರ ಹೆಸರು ಉಲ್ಲೇಖಿಸುವಂತೆ ರಹಮಾನ್ ಮತ್ತು ಚಲನಚಿತ್ರ ನಿರ್ಮಾಪಕರಿಗೆ ನಿರ್ದೇಶನ ನೀಡಿತ್ತು. ಅಲ್ಲದೆ ₹2 ಲಕ್ಷ ದಂಡ ವಿಧಿಸಿದ್ದ ಅದು ರಹಮಾನ್ ಮತ್ತು ನಿರ್ಮಾಪಕರು ₹2 ಕೋಟಿ ಠೇವಣಿ ಇಡುವಂತೆ ತಾಕೀತು ಮಾಡಿತ್ತು.

ನಂತರ ಆದೇಶದ ವಿರುದ್ಧ ರಹಮಾನ್ ಮೇಲ್ಮನವಿ ಸಲ್ಲಿಸಿದರು. ಮೇ 6ರಂದು ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆಗೆ ನಿರ್ಬಂಧ ವಿಧಿಸಿತ್ತು. ವಿಭಾಗೀಯ ಪೀಠ ರೆಹಮಾನ್ ಮತ್ತು ನಿರ್ಮಾಪಕರ ಮೇಲೆ ವಿಧಿಸಲಾದ ದಂಡಗಳಿಗೂ ಸಹ ತಡೆ ನೀಡಿತ್ತು. ಆದರೆ, ಏಕ-ಸದಸ್ಯ ಪೀಠದ ಆದೇಶಕ್ಕೆ ಅನುಗುಣವಾಗಿ ₹2 ಕೋಟಿ ಮೊತ್ತವನ್ನು ಠೇವಣಿ ಇಡುವಂತೆ ಅದು ಸೂಚಿಸಿತ್ತು. ಠೇವಣಿ ಇಡುವಂತೆ ತಾನು ನೀಡಿರುವ ನಿರ್ದೇಶನ ಮೇಲ್ಮನವಿಯ ಅರ್ಹತೆಗೆ ಸಂಬಂಧಿಸಿದ್ದಲ್ಲ ಎಂದು ಅದು ಸ್ಪಷ್ಟಪಡಿಸಿತ್ತು.