Prashant Umrao, Delhi High Court 
ಸುದ್ದಿಗಳು

ವಲಸೆ ಕಾರ್ಮಿಕರ ಬಗ್ಗೆ ಸುಳ್ಳುಸುದ್ದಿ: ಪ್ರಶಾಂತ್ ಉಮ್ರಾವ್‌ಗೆ ಟ್ರಾನ್ಸಿಟ್‌ ಜಾಮೀನು ನೀಡಿದ ದೆಹಲಿ ಹೈಕೋರ್ಟ್‌

ಈ ರೀತಿಯ ಆಧಾರರಹಿತ ಆರೋಪ ಮತ್ತು ಪ್ರಚೋದಕ ಟ್ವೀಟ್‌ಗಳನ್ನು ಮಾಡುವ ಅಭ್ಯಾಸ ಉಮ್ರಾವ್ ಅವರಿಗೆ ಇದ್ದು ನಂತರ ಯಾವುದೇ ಸ್ಪಷ್ಟೀಕರಣ ನೀಡದೆ ಅದನ್ನು ಅಳಿಸಿಹಾಕುತ್ತಾರೆ ಎಂದು ವಾದಿಸಿದ ತಮಿಳುನಾಡು ಸರ್ಕಾರ.

Bar & Bench

ದಕ್ಷಿಣ ಭಾರತದಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಸುಳ್ಳು ಸುದ್ದಿ ಹರಡಿದ ಕಾರಣಕ್ಕೆ ತಮಿಳುನಾಡು ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ  ಉತ್ತರ ಪ್ರದೇಶ ಬಿಜೆಪಿ ವಕ್ತಾರ ಮತ್ತು ಗೋವಾ ಸರ್ಕಾರದ ಸ್ಥಾಯಿ ವಕೀಲ ಪ್ರಶಾಂತ್ ಉಮ್ರಾವ್ ಅವರಿಗೆ ಮಾರ್ಚ್ 20ರವರೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಉಮ್ರಾವ್ ಅವರು 12 ವಾರಗಳವರೆಗೆ ಟ್ರಾನ್ಸಿಟ್‌  ಜಾಮೀನು ನೀಡುವಂತೆ ಕೋರಿದ್ದರು. ನನ್ನ ವಿರುದ್ಧ ಇನ್ನಿಲ್ಲದಂತೆ ಸಂಚು ಮಾಡಲಾಗಿದೆ. ತೂತ್ತುಕುಡಿಯಲ್ಲಿ ನನ್ನೊಬ್ಬನ ವಿರುದ್ಧವೇ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಅಷ್ಟು ಸುದೀರ್ಘ ಕಾಲ ಟ್ರಾನ್ಸಿಟ್‌ ಜಾಮೀನು ನೀಡಲು ಅವಕಾಶವಾಗದು ಎಂದ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಮಾರ್ಚ್ 20ರವರೆಗೆ ಅವರಿಗೆ ಟ್ರಾನ್ಸಿಟ್‌ ಜಾಮೀನು ಮಂಜೂರು ಮಾಡಿದರು.

ಈ ರೀತಿಯ ಆಧಾರರಹಿತ ಆರೋಪ ಮತ್ತು ಪ್ರಚೋದಕ ಟ್ವೀಟ್‌ಗಳನ್ನು ಮಾಡುವ ಅಭ್ಯಾಸ ಉಮ್ರಾವ್‌ ಅವರಿಗೆ ಇದ್ದು ನಂತರ ಯಾವುದೇ ಸ್ಪಷ್ಟೀಕರಣ ನೀಡದೆ ಅದನ್ನು ಅಳಿಸಿಹಾಕುತ್ತಾರೆ ಎಂದು ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ದೂರಿದರು.

 “… ಅವರು ಗೋವಾ ಪರ ಸ್ಥಾಯಿ ವಕೀಲರಾಗಿದ್ದಾರೆ. ಅವರು ಕೆಲ ನಿಲುವುಳ್ಳ ವ್ಯಕ್ತಿ. ವಾಕ್‌ ಸ್ವಾತಂತ್ರ್ಯ ಎಂದರೆ ಭೀತಿ ಸೃಷ್ಟಿಸುವುದಲ್ಲ. ಅಂತಹ ಟ್ವೀಟ್‌ ಮಾಡಿ ಆ ಬಳಿಕ ಯಾವುದೇ ಸ್ಪಷ್ಟೀಕರಣ ನೀಡದೆ ಅದನ್ನು ಅಳಿಸಿ ಹಾಕಿದ ಸತತ ದಾಖಲೆ ಅವರ ಬಗ್ಗೆ ಇದೆ” ಎಂದು ಅವರು ಹೇಳಿದರು.

ಈ ಹಂತದಲ್ಲಿ ನ್ಯಾಯಮೂರ್ತಿಗಳು “ಅವರಿಗೆ ಸೂಕ್ತ ಪರಿಹಾರ ದೊರೆಯುತ್ತದೆಯೇ ಎಂಬುದರ ಬಗ್ಗೆ ಮಾತ್ರ ಗಮನ ಹರಿಸುವೆ. ಅವರಿಗೆ ನ್ಯಾಯ ಸಿಗುವುದನ್ನು ಮಾತ್ರ ನಾನು ಖಚಿತಪಡಿಸುತ್ತೇನೆ” ಎಂದು ತಿಳಿಸಿ  ಮಾರ್ಚ್ 20 ರವರೆಗೆಉಮ್ರಾವ್ ಅವರಿಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದರು.

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಚಿತ್ರವನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಚಿತ್ರದೊಂದಿಗೆ ಹಂಚಿಕೊಂಡಿದ್ದ ಉಮ್ರಾವ್‌ “ಹಿಂದಿ ಮಾತನಾಡಿದ್ದಕ್ಕಾಗಿ ಬಿಹಾರದ 12 ವಲಸೆ ಕಾರ್ಮಿಕರನ್ನು ತಮಿಳುನಾಡಿನಲ್ಲಿ ನೇಣು ಹಾಕಲಾಗಿದೆ”, “ಈ ದಾಳಿಯ ಹೊರತಾಗಿಯೂ ಸ್ಟಾಲಿನ್‌ ಅವರ ಜನ್ಮ ದಿನಾಚರಣೆಯಲ್ಲಿ ತೇಜಸ್ವಿ ಯಾದವ್‌ ಭಾಗವಹಿಸಿದ್ದರು ಎಂದು ಟ್ವೀಟ್‌ ಮಾಡಿದ್ದರು. ಆದರೆ, ಬಿಹಾರ ಮತ್ತು ತಮಿಳುನಾಡು ಸರ್ಕಾರಗಳು ಇವು ಕೇವಲ ವದಂತಿ ಮತ್ತು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದವು.