ಇತ್ತೀಚೆಗೆ ನ್ಯಾಯಾಧೀಶರನ್ನು ದೂರುವ ಪರಿಪಾಠ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಬೇಸರ ವ್ಯಕ್ತಪಡಿಸಿದರು.
ಬಲಪಂಥೀಯ ಸಂಘಟನೆಗಳಿಂದ ಕ್ರೈಸ್ತರ ವಿರುದ್ಧ ಉದ್ದೇಪೂರ್ವಕ ಹಿಂಸಾಚಾರ ನಡೆಯುತ್ತಿದೆ ಎಂದು ಬೆಂಗಳೂರು ಡಯಾಸಿಸ್ ಆರ್ಚ್ ಬಿಷಪ್ ಪೀಟರ್ ಮಚಾಡೊ ಮತ್ತು ರಾಷ್ಟ್ರೀಯ ಐಕ್ಯತಾ ವೇದಿಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಂತೆ ವಕೀಲರೊಬ್ಬರು ಮೌಖಿಕವಾಗಿ ಪ್ರಸ್ತಾಪಿಸಿದ ಬಳಿಕ ನ್ಯಾಯಮೂರ್ತಿಗಳು “ಪ್ರಕರಣ ಕೈಗೆತ್ತಿಕೊಳ್ಳದ ಬಗ್ಗೆ ಮಾಧ್ಯಮಗಳಲ್ಲಿ ಟೀಕೆಗಳು ಕೇಳಿ ಬರುತ್ತಿವೆ” ಎಂದರು.
“ನನಗೆ ಕೋವಿಡ್ ಸೋಂಕು ತಗುಲಿತ್ತು. ಹೀಗಾಗಿ ಪ್ರಕರಣವನ್ನು ಮುಂದೂಡಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಳ್ಳಲಿಲ್ಲ ಎಂಬ ಸುದ್ದಿ ಓದಿದೆ. ನಮ್ಮನ್ನು ಗುರಿಪಡಿಸುವುದಕ್ಕೂ ಒಂದು ಮಿತಿ ಇದೆ” ಎಂದು ಅಸಮಾಧಾನ ಸೂಚಿಸಿದರು.
ಹಿಂಸಾಚಾರ ಘಟನೆಗಳ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ವಿಶೇಷ ತಂಡದಿಂದ ತನಿಖೆ ನಡೆಸುವಂತೆ ಮತ್ತು ಸಂತ್ರಸ್ತರ ಮೇಲೆ ಇಂತಹ ದಾಳಿಕೋರರು ದಾಖಲಿಸಿರುವ ಕ್ಷುಲ್ಲಕ ಪ್ರಕರಣಗಳನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ವಿನಂತಿಸಲಾಗಿತ್ತು.