ಸುದ್ದಿಗಳು

ಟ್ವಿಟರ್ ಖಾತೆಯ ಬ್ಲೂಟಿಕ್ ಮರಳಿಸಲು ಕೋರಿಕೆ: ಸಿಬಿಐ ಮಾಜಿ ನಿರ್ದೇಶಕ ರಾವ್‌ಗೆ ದಂಡ ವಿಧಿಸಿದ ದೆಹಲಿ ಹೈಕೋರ್ಟ್

Bar & Bench

ತಮ್ಮ ಟ್ವಿಟರ್‌ ಖಾತೆಗೆ ಒದಗಿಸಿದ್ದ ಬ್ಲೂಟಿಕ್‌ ಅನ್ನು ಮರಳಿಸಲು ಕೋರಿ ಅರ್ಜಿ ಸಲ್ಲಿಸಿದ್ದಕ್ಕಾಗಿ, ಸಂಕ್ಷಿಪ್ತ ಅವಧಿಗೆ ಸಿಬಿಐ ನಿರ್ದೇಶಕರಾಗಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಎಂ ನಾಗೇಶ್ವರ ರಾವ್‌ ಅವರಿಗೆ ದೆಹಲಿ ಹೈಕೋರ್ಟ್‌ ₹10,000 ದಂಡ ವಿಧಿಸಿದೆ.

ಇಂಥದ್ದೇ ಮನವಿಯೊಂದಿಗೆ ರಾವ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 7 ರಂದು ನ್ಯಾಯಾಲಯ ವಿಲೇವಾರಿ ಮಾಡಿದ್ದರೂ ಇಷ್ಟು ಬೇಗ ಅವರು ಅರ್ಜಿಸಲು ಕಾರಣವೇನು ಎಂಬ ಬಗ್ಗೆ ಸಮರ್ಥನೆ ಇಲ್ಲ ಎಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

"ನಾವು ಏಪ್ರಿಲ್ 7ರಂದು ಆದೇಶ ನೀಡಿದ್ದೇವೆ. ಕೂಡಲೇ ನ್ಯಾಯಾಲಯವನ್ನು ಸಂಪರ್ಕಿಸಲು ನಿಮಗೆ ಎದುರಾದ ತೊಂದರೆಯಾದರೂ ಏನು? ನಿಮ್ಮ ಕಕ್ಷಿದಾರರಿಗೆ ಸಾಕಷ್ಟು ಬಿಡುವಿನ ಸಮಯ ಇದೆ ಎಂದು ತೋರುತ್ತಿದೆ. ನೀವು ನಮ್ಮಿಂದ ಪ್ರತಿ ಉಡುಗೊರೆ ಬಯಸುವಿರಾ?" ಎಂದು ನ್ಯಾಯಾಲಯ ಖಾರವಾಗಿ ಪ್ರಶ್ನಿಸಿತು.

ರಾವ್ ಪರ ವಾದ ಮಂಡಿಸಿದ ವಕೀಲ ರಾಘವ್ ಅವಸ್ಥಿ, ತಮ್ಮ ಕಕ್ಷೀದಾರರ ಟ್ವಿಟರ್‌ನೊಂದಿಗಿನ ಕೊನೆಯ ಸಂವಹನ ಏಪ್ರಿಲ್ 18 ರಂದು ನಡೆದಿದೆ. ಅವರ ಬ್ಲೂಟಿಕ್‌ ಇನ್ನೂ ಮರಳಿಸಲಾಗಿಲ್ಲ ಎಂದು ವಾದಿಸಿದರು. ಇಂಥದ್ದೇ ಪ್ರಕರಣಗಳೊಂದಿಗೆ ಈ ಪ್ರಕರಣವನ್ನೂ ವಿಚಾರಣೆ ನಡೆಸಬೇಕೆಂದು ಅವರು ಕೋರಿದರು.

ಆದರೂ ಮನವಿ ತಿರಸ್ಕರಿಸಿದ ನ್ಯಾಯಾಲಯ ದಂಡದೊಂದಿಗೆ ಅರ್ಜಿಯನ್ನು ವಜಾಗೊಳಿಸಿತು.

ಏನಿದು ಬ್ಲೂ ಟಿಕ್‌?

ನಕಲಿ ಖಾತೆಗಳು, ಸುಳ್ಳು ಸುದ್ದಿಗಳ ಹರಡುವಿಕೆ ತಪ್ಪಿಸಲು ಖ್ಯಾತನಾಮರು, ಪ್ರಸಿದ್ಧ ಸಂಸ್ಥೆಗಳು, ರಾಜಕಾರಣಿಗಳು ಹಾಗೂ ಕೆಲ ಕ್ಷೇತ್ರಗಳಲ್ಲಿ ಪ್ರಮುಖರು ಅಧಿಕೃತ ಮತ್ತು ದೃಢೀಕೃತ ಖಾತೆಗಳನ್ನು ಟ್ವಿಟರ್‌ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಹೊಂದಿರುತ್ತಾರೆ. ಬಳಕೆದಾರರ ಹೆಸರಿನ ಬಲ ಮೇಲ್ಭಾಗದಲ್ಲಿ ನೀಲಿಬಣ್ಣದ ʼಸರಿʼ ಗುರುತು ಇರುತ್ತದೆ. ಇದೊಂದು ಪರಿಶೀಲಿಸಲಾದ ಖಾತೆಯಾಗಿದ್ದು ಖಾತೆದಾರರ ಅಧಿಕೃತತೆಯನ್ನು ಸಾರುತ್ತದೆ.