ಗೂಗಲ್ ಮತ್ತು ಗೂಕಲ್ 
ಸುದ್ದಿಗಳು

ಗೂಗಲ್ ಹೋಲುವ 'ಗೂಕಲ್': ವಾಣಿಜ್ಯ ಚಿಹ್ನೆ ಉಲ್ಲಂಘಿಸದಂತೆ ವ್ಯಕ್ತಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

Bar & Bench

'ಗೂಕಲ್' ಹೆಸರಿನಲ್ಲಿ ವಿವಿಧ ಸಂಸ್ಥೆಗಳನ್ನು ನೋಂದಾಯಿಸಿದ್ದ ಮತ್ತು ಜನಪ್ರಿಯ ಸರ್ಚ್‌ ಎಂಜಿನ್‌ ಗೂಗಲ್ ಉತ್ಪನ್ನಗಳನ್ನು ಹೋಲುವ ವಾಣಿಜ್ಯ ಚಿಹ್ನೆ ನೋಂದಾಯಿಸಲು ಹೊರಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ 'ಗೂಗಲ್' ಮತ್ತು 'ಜಿಪೇ' ಹೋಲುವ ಗುರುತು ಹಾಗೂ ವಾಣಿಜ್ಯ ಚಿಹ್ನೆ ಬಳಸದಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ಬಂಧ ವಿಧಿಸಿದೆ.

ಗೂಕಲ್ ಹೌಸಿಂಗ್ ಎಲ್ಎಲ್‌ಪಿ, ಗೂಕಲ್ ತಮಿಳು ನ್ಯೂಸ್ ಎಲ್ಎಲ್‌ಪಿ, ಜಿಪೇ (GIPAY) ಆನ್‌ಲೈನ್‌ ಸರ್ವಿಸ್ ಎಲ್ಎಲ್‌ಪಿ ಹಾಗೂ ಗೂಕಲ್ ಟ್ರೇಡ್ ಪೇಮೆಂಟ್ ಎಲ್ಎಲ್‌ಪಿಯಲ್ಲಿ ಪಾಲುದಾರ ಎನ್ನಲಾದ ಪಿ ರಾಜೇಶ್ ರಾಮ್ ಎಂಬ ವ್ಯಕ್ತಿ ವಿರುದ್ಧ ಗೂಗಲ್‌ ಎಲ್‌ಎಲ್‌ಸಿ ವಾಣಿಜ್ಯ ಚಿಹ್ನೆ ಉಲ್ಲಂಘನೆ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂಜೀವ್ ನರುಲಾ ಆದೇಶ ಹೊರಡಿಸಿದ್ದಾರೆ. 

ರಾಮ್‌ ಅವರ ʼGooogleʼ, ʼGoocleʼ, ʼGeogleʼ, ʼGipayʼ ಹೆಸರುಗಳು ಗೂಗಲ್‌ ಮತ್ತು ಜಿಪೇಯ ವಾಣಿಜ್ಯಚಿಹ್ನೆಗಳನ್ನು ರಚನಾತ್ಮಕವಾಗಿ ಹಾಗೂ ಉಚ್ಚಾರಣಾರೂಪದಲ್ಲಿ ಹೋಲುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.

ಈ ಗುರುತುಗಳು ಗೂಗಲ್‌ಗೆ ವಂಚನೆ ಎಸಗುವ ರೀತಿಯಲ್ಲಿ ಹೋಲಿಕೆಯಾಗಲಿದ್ದು ಪ್ರತಿವಾದಿ ಆನ್‌ಲೈನ್‌ ಸುದ್ದಿ, ಜಾಹೀರಾತು, ಟಿವಿ, ಬ್ಯಾಂಕಿಂಗ್ ಹಾಗೂ ಪಾವತಿ ಸೇವೆಗಳಿಗೆ ಗೂಗಲ್‌ ಹೋಲುವ ಹೆಸರುಗಳನ್ನು ಬಳಸುತ್ತಿದ್ದು ಗ್ರಾಹಕರಲ್ಲಿ ಗೊಂದಲು ಉಂಟುಮಾಡುವ ಸಾಧ್ಯತೆ ಇದೆ ಎಂದು ನ್ಯಾ. ನರುಲಾ ತಿಳಿಸಿದರು.

ನ್ಯಾಯಮೂರ್ತಿ ಸಂಜೀವ್ ನರುಲಾ

ತಾನು ವಾಡಿಕೆಯಂತೆ ಶೋಧ ನಡೆಸುತ್ತಿದ್ದಾಗ ರಾಮ್‌ ಅವರು ವಾಣಿಜ್ಯ ಚಿಹ್ನೆ ಉಲ್ಲಂಘಿಸಿರುವುದು ತಿಳಿದು ಬಂತು ಎಂದು ಗೂಗಲ್‌ ವಾದಿಸಿತ್ತು.

ಗೂಕಲ್ ಮಾರ್ಕ್ಸ್ ವಿರುದ್ಧ ಹೈಕೋರ್ಟ್ ನಲ್ಲಿ ವಿಚಾರಣೆ

ಗೂಗಲ್ ವಾದದಲ್ಲಿ ಹುರುಳಿರುವುದನ್ನು ಕಂಡುಕೊಂಡ ನ್ಯಾಯಾಲಯ, ಯುಆರ್‌ಎಲ್‌ ಅಥವಾ ಡೊಮೇನ್ ಹೆಸರನ್ನು ನಮೂದಿಸುವಲ್ಲಿ ಮುದ್ರಣ ದೋಷ ಉಂಟಾದರೆ ಅದು ಸಂಭಾವ್ಯ ಬಳಕೆದಾರರನ್ನು ಪ್ರತಿವಾದಿಯ ಜಾಲತಾಣಕ್ಕೆ ಒಯ್ದು ದಾರಿ ತಪ್ಪಿಸಬಹುದು ಎಂಬುದನ್ನು ಒಪ್ಪಿಕೊಂಡಿತು.

ಆದ್ದರಿಂದ, ಮೋಸದ ಚಿಹ್ನೆ ಮತ್ತು ವಾಣಿಜ್ಯ ಹೆಸರುಗಳಡಿ ಯಾವುದೇ ಸೇವೆಯೊಂದಿಗೆ ವ್ಯವಹರಿಸದಂತೆ ನ್ಯಾಯಾಲಯ ಪ್ರತಿವಾದಿಯನ್ನು ನ್ಯಾಯಾಲಯ ನಿರ್ಬಂಧಿಸಿತು. ಪ್ರತಿವಾದಿ ನೋಂದಾಯಿಸಿದ ಡೊಮೇನ್ ಹೆಸರುಗಳನ್ನು ಅಮಾನತುಗೊಳಿಸಲು ಅದು ಆದೇಶಿಸಿತು.

'ಗೂಕಲ್', 'ಜಿಯೋಗಲ್' ಮತ್ತು 'ಗಿಪೇ' ಹೆಸರುಗಳನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಪುಟಗಳು ಸೇರಿದಂತೆ ಆನ್‌ಲೈನ್‌ ವಸ್ತುವಿಷಯಗಳನ್ನು ತೆಗೆದುಹಾಕುವಂತೆ ನ್ಯಾಯಾಲಯ ಪ್ರತಿವಾದಿಗೆ ನಿರ್ದೇಶನ ನೀಡಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Google Llc vs Mr. P. Rajesh Ram & Ors.pdf
Preview