ಭಾರತದ ಭೂಪ್ರದೇಶದ ಮೇಲೆ ಚೀನಾ ನಡೆಸಿದ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ಮಾಹಿತಿ ಕೋರಿ ಮಾಜಿ ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಮನವಿಗೆ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರದಿಂದ ಉತ್ತರ ಕೇಳಿದೆ.
ಈ ಸಂಬಂಧ ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ ಹಾಗೂ ಕೇಂದ್ರ ಮಾಹಿತಿ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರು ವಿಚಾರಣೆಗಾಗಿ ಬರುವ ವರ್ಷ ಜನವರಿ 8ಕ್ಕೆ ಪ್ರಕರಣ ಪಟ್ಟಿ ಮಾಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಆರ್‌ಟಿಐ ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದ ಸ್ವಾಮಿ ಅವರು ಚೀನಾಕ್ಕೆ ʼಬಿಟ್ಟುಕೊಟ್ಟʼ ಭೂಮಿಯ ವಿಸ್ತೀರ್ಣ ಮತ್ತು ಅದರ ನಕ್ಷೆಯ ವಿವರಗಳನ್ನು ಕೋರಿದ್ದರು.
ತಮ್ಮ ಆರ್‌ಟಿಐ ಅರ್ಜಿಯನ್ನು ವಿವಿಧ ಇಲಾಖೆಗಳಿಗೆ ವರ್ಗಾಯಿಸಲಾಗಿದ್ದು ಅದಕ್ಕೆ ಉತ್ತರಿಸುವ ಕಾಲಮಿತಿ ಮುಗಿದ ಬಳಿಕವೂ ಅರ್ಜಿ ವರ್ಗಾಯಿಸುವುದು ಮುಂದುವರೆದಿದೆ ತಾವು ಸಲ್ಲಿಸಿದ್ದ ಮೊದಲ ಮನವಿಗೂ ಇದೇ ಗತಿ ಒದಗಿತು. ಮಾರ್ಚ್ 2023 ರಲ್ಲಿ ಮುಖ್ಯ ಮಾಹಿತಿ ಆಯೋಗದ ಮುಂದೆ ಎರಡನೇ ಮನವಿಯನ್ನು ಸಲ್ಲಿಸಿದರೂ ಅಲ್ಲಿಂದ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಅವರು ಅರ್ಜಿಯಲ್ಲಿ ದೂರಿದ್ದರು.
ತಾವು ಕೇಳಿದ ಮಾಹಿತಿ ರಾಷ್ಟ್ರದ ಸಾರ್ವಭೌಮತೆ ಮತ್ತು ಏಕತೆಗೆ ಸಂಬಂಧಿಸಿದ ನಿರ್ಣಾಯಕ ಮಾಹಿತಿಯಾಗಿದ್ದು ವಿಳಂಬ ಧೋರಣೆಯಿಂದಾಗಿ ಮಾಹಿತಿಯ ಪ್ರಸ್ತುತತೆ ಮತ್ತು ಅಗತ್ಯಕ್ಕೆ ಸೋಲಾಗಿದೆ ಎಂದು ಸ್ವಾಮಿ ಹೇಳಿದ್ದರು.