PM CARES Fund 
ಸುದ್ದಿಗಳು

ಆಮ್ಲಜನಕ ಕೊರತೆಯಿಂದ ತಂದೆ ದುರ್ಮರಣ: ಮಕ್ಕಳ ಪರಿಹಾರ ಕೋರಿಕೆ ಆಧರಿಸಿ ಕೇಂದ್ರ, ರಾಜ್ಯಕ್ಕೆ ದೆಹಲಿ ಹೈಕೋರ್ಟ್‌ ನೋಟಿಸ್‌

ಕೋವಿಡ್‌ ಎರಡನೇ ಅಲೆಯ ವೇಳೆ ಆಮ್ಲಜನಕ ಕೊರತೆಯಿಂದ ಮನೆಗೆ ಆಧಾರವಾದವರನ್ನು ಕಳೆದುಕೊಂಡ ಅಪ್ರಾಪ್ತ ಮಕ್ಕಳಿರುವ ಕುಟುಂಬಕ್ಕೆ ಘೋಷಿಸಲಾದ ಪರಿಹಾರ ಯೋಜನೆಗಳನ್ನು ಜಾರಿಗೊಳಿಸುವಂತೆ ಕೋರಿದ್ದ ಮನವಿ ಸಂಬಂಧ ದೆಹಲಿ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

Bar & Bench

ಕೊರೊನಾ ವೈರಸ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಮನೆಗೆ ಆಧಾರವಾದವರನ್ನು ಕಳೆದುಕೊಂಡ ಅಪ್ರಾಪ್ತ ಮಕ್ಕಳಿರುವ ಕುಟುಂಬಕ್ಕೆ ಘೋಷಿಸಲಾದ ಪರಿಹಾರ ಯೋಜನೆಗಳನ್ನು ಜಾರಿಗೊಳಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಶುಕ್ರವಾರ ದೆಹಲಿ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದ್ದು, ಉತ್ತರಿಸುವಂತೆ ಆದೇಶ ಮಾಡಿದೆ.

ನ್ಯಾಯಮೂರ್ತಿ ಅಮಿತ್‌ ಬನ್ಸಲ್‌ ಅವರಿದ್ದ ಏಕಸದಸ್ಯ ಪೀಠವು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಮತ್ತು ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ (ಡಿಸಿಪಿಸಿಆರ್‌) ನೋಟಿಸ್‌ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ದೆಹಲಿಯ ಜೈಪುರ ಗೋಲ್ಡನ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ತಂದೆಯನ್ನು ಕಳೆದುಕೊಂಡಿರುವ ಎರಡನೇ ಮತ್ತು ಏಳನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಅಪ್ರಾಪ್ತ ಮಕ್ಕಳು ಮನವಿ ಸಲ್ಲಿಸಿದ್ದಾರೆ.

ಕೋವಿಡ್‌ ಶುಶ್ರೂಷೆಯ ವೇಳೆ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದವರ ಕುಟುಂಬಕ್ಕಾಗಲಿ ಅಥವಾ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗಾಗಲಿ ಕೇಂದ್ರ ಮತ್ತು ದೆಹಲಿ ಸರ್ಕಾರಗಳೆರಡೂ ಹಲವು ಪರಿಹಾರ ಯೋಜನೆಗಳನ್ನು ಘೋಷಿಸಿದ್ದರೂ ಇಲ್ಲಿಯವರೆಗೆ ಯಾವುದನ್ನೂ ಜಾರಿಗೊಳಿಸಲಾಗಿಲ್ಲ ಎಂದು ಇಬ್ಬರು ಮಕ್ಕಳ ಪರವಾಗಿ ಸಲ್ಲಿಸಲಾದ ಮನವಿಯಲ್ಲಿ ಅವರ ಜೀವನ ನಿರ್ವಹಣೆ ಹೊತ್ತ ಪಾಲಕರು ತಿಳಿಸಿದ್ದಾರೆ.

ಕೋವಿಡ್‌ನಿಂದಾಗಿ ಅನಾಥವಾಗಿರುವ ಮಕ್ಕಳಿಗೆ 50,000 ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಿಸಿದ್ದಾರೆ. ಅದೇ ರೀತಿ, ಅನಾಥ ಮಕ್ಕಳಿಗೆ ಪಿಎಂ ಕೇರ್ಸ್‌ ಪರಿಹಾರದ ಯೋಜನೆ ಕೂಡ ಘೋಷಿತವಾಗಿದೆ. ಆದರೆ, ಹೀಗೆ ಘೋಷಿಸಲಾದ ಯೋಜನೆಗಳು ಕಾಗದದ ಮೇಲೆ ಮಾತ್ರವೇ ಇವೆಯೇ ಹೊರತು ಜಾರಿಗೆ ಬಂದಿಲ್ಲ ಎಂದು ಹೇಳಲಾಗಿದೆ.

ಪ್ರಕರಣದ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಲಾಗಿದೆ.