Baba Ramdev and Delhi High Court 
ಸುದ್ದಿಗಳು

ಅಲೋಪತಿ ಕುರಿತ ತಮ್ಮ ಹೇಳಿಕೆ ಬಗ್ಗೆ ಪತ್ರಿಕ್ರಿಯೆ ಸಲ್ಲಿಸಲು ಬಾಬಾ ರಾಮ್‌ದೇವ್‌ಗೆ ನೋಟಿಸ್‌ ನೀಡಿದ ದೆಹಲಿ ಹೈಕೊರ್ಟ್‌

ಅಲೋಪತಿ ಚಿಕಿತ್ಸಾ ಪದ್ಧತಿಯ ಬಗ್ಗೆ ತಪ್ಪು ಮಾಹಿತಿ ಪ್ರಚುರ ಪಡಿಸಿರುವ ಹಾಗೂ ಕೋವಿಡ್‌ಗೆ ಪತಂಜಲಿ ಬ್ರ್ಯಾಂಡ್‌ನ ಔಷಧ ಕೊರೊನಿಲ್ ಪರಿಹಾರ ಎಂದು ಘಂಟಾಘೋಷವಾಗಿ ಹೇಳಿರುವ ಬಾಬಾ ರಾಮ್‌ದೇವ್‌ ಅವರ ಹೇಳಿಕೆಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ

Bar & Bench

ಅಲೋಪತಿ ಚಿಕಿತ್ಸಾ ಪದ್ಧತಿಯ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಚುರ ಪಡಿಸಿರುವ ಹಾಗೂ ಕೋವಿಡ್‌ಗೆ ಪತಂಜಲಿ ಬ್ರ್ಯಾಂಡ್‌ನ ಔಷಧ ಕೊರೊನಿಲ್ ಪರಿಹಾರ ಎಂದು ಘಂಟಾಘೋಷವಾಗಿ ಹೇಳಿರುವ ಬಾಬಾ ರಾಮ್‌ದೇವ್‌ ಅವರ ಹೇಳಿಕೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಸಂಬಂಧ ರಾಮ್‌ದೇವ್‌ ಅವರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ. (ಏಮ್ಸ್‌ ನಿವಾಸಿ ವೈದ್ಯರ ಒಕ್ಕೂಟ ವರ್ಸಸ್‌ ರಾಮ್‌ ಕಿಷನ್‌ ಯಾದವ್‌ ಅಲಿಯಾಸ್‌ ಸ್ವಾಮಿ ರಾಮದೇವ್ ಮತ್ತಿತರರು).

ಬಾಬಾ ರಾಮ್‌ದೇವ್‌ ಅವರಿಗೆ ನೋಟಿಸ್ ನೀಡುವುದಕ್ಕೂ ಮುನ್ನ ನ್ಯಾ. ಸಿ ಹರಿಶಂಕರ್‌ ಅವರಿದ್ದ ಪೀಠವು ಅರ್ಜಿದಾರರ ಪರ ವಕೀಲರಾದ ಅಖಿಲ್‌ ಸಿಬಲ್‌ ಅವರ ವಾದವನ್ನು ಪ್ರಕರಣದ ಸಂಬಂಧ ಆಲಿಸಿತು.

ತಮ್ಮ ವಾದದಲ್ಲಿ ಸಿಬಲ್‌ ಅವರು, ಬಾಬಾ ರಾಮ್‌ದೇವ್‌ ಕೋವಿಡ್‌ಗೆ ಕೊರೊನಿಲ್ ಪರಿಹಾರ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆಪಾದಿಸಿದರು. “ಅವರ ಹೇಳಿಕೆ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುವಂತದ್ದಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ,” ಎಂದು ಸಿಬಲ್‌ ಹೇಳಿದರು.

ಮುಂದುವರೆದು, “ರಾಮ್‌ದೇವ್‌ ಅವರಿಗೆ ಹೀಗೆ ಹೇಳುವುದು ಅಭ್ಯಾಸವಾಗಿದೆ, ಈ ಹಿಂದೆಯೂ ಅವರು ಇದನ್ನು ಮಾಡಿದ್ದಾರೆ. ಅವರು ತಾನು ಏಡ್ಸ್ ಗುಣಪಡಿಸುವುದಾಗಿ ಹೇಳಿದ್ದರು,” ಎಂದು ನ್ಯಾಯಾಲಯದ ಗಮನಕ್ಕೆ ತರುವ ಪ್ರಯತ್ನ ಮಾಡಿದರು.

ವಾದವನ್ನು ಆಲಿಸಿದ ನ್ಯಾ. ಹರಿಶಂಕರ್ ಅವರು, ಸೆಕ್ಷನ್‌ 91ನ್ನು ಉಲ್ಲೇಖಿಸಿ (ಸಾರ್ವಜನಿಕ ಪೀಡನೆ ಹಾಗೂ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವಂತಹ ಕ್ರಿಯೆಗಳು), “ನೀವು ನನಗೆ ಇದೆಲ್ಲವೂ (ರಾಮ್‌ದೇವ್‌ ಅವರ ಹೇಳಿಕೆ) 'ಸಾರ್ವಜನಿಕ ಪೀಡನೆ'ಯ ಅಡಿ ಅಥವಾ 'ಸಾರ್ವಜನಿಕ ಆರೋಗ್ಯಕ್ಕೆ ತೊಂದರೆ ಮಾಡುವ ಅಥವಾ ತೊಂದರೆ ಮಾಡುವಂತಹ ತಪ್ಪು ಕೃತ್ಯಗಳು” ಎಂದು ಮನವರಿಕೆ ಮಾಡಿಕೊಡಬೇಕು,” ಎಂದರು.

ಅಲ್ಲದೆ ನ್ಯಾಯಮೂರ್ತಿಗಳು, “ಒಂದು ವೇಳೆ ನಾನೊಬ್ಬ ಸಾರ್ವಜನಿಕ ವ್ಯಕ್ತಿಯಾಗಿದ್ದು, ನನ್ನ ಬಳಿ ಕೊರೊನಾವನ್ನು ನಿವಾರಿಸುವ ಔಷಧಿ ಇದೆ ಎಂದು ಹೇಳಿಕೆ ನೀಡಿದರೆ, ಅಲೋಪತಿಗೆ ಹೋಗುವ ಅಗತ್ಯವಿಲ್ಲ ನನ್ನ ಔಷಧವೇ ಸಾಕು ಎಂದರೆ, ಆಗ ಕೆಲವರು ನನ್ನ ಔಷಧಿ ಪಡೆಯಲು ಬರಬಹುದು. ಬಹುತೇಕರು ನನ್ನ ಚಿಕಿತ್ಸೆಯನ್ನು ಪಾಲಿಸಲು ಮುಂದಾಗದೆಯೂ ಇರಬಹುದು. ಇಂತಹ ಸಂದರ್ಭದಲ್ಲಿ ಯಾವ ಹಂತದಲ್ಲಿ ಅದು ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತದೆ?” ಎಂದು ಅರ್ಜಿದಾರ ಪರ ವಕೀಲರನ್ನು ಪ್ರಶ್ನಿಸಿದರು.

“ನಾನು ಏನೇ ಹೇಳಬಹುದು ಅಂತಿಮವಾಗಿ ಕೊಳ್ಳುವುದು ಬಿಡುವುದು ವ್ಯಕ್ತಿಯ ವೈಯಕ್ತಿಕ ನಿರ್ಧಾರವಾಗಿರುತ್ತದೆ… ಇಂತಹ ಸಂದರ್ಭದಲ್ಲಿ ನನ್ನ ಹೇಳಿಕೆಯು ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವುದು ಎಂದು ಹೇಳಲು ಸಾಧ್ಯವೇ? ಈ ಆಂಶವು ಸ್ವಲ್ಪ ಚರ್ಚೆಗೆ ಅವಕಾಶವಿರುವಂಥದ್ದಾಗಿದೆ,” ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಸಿಬಲ್‌ ಅವರು “ತಪ್ಪು ಕೃತ್ಯವೆಂದರೆ ಏನು” ಎನ್ನುವ ಬಗ್ಗೆ ಹಾಗೂ “ಸಾರ್ವಜನಿಕ ಪೀಡನೆ ಎಂದರೆ ಏನು" ಎನ್ನುವ ಕುರಿತಾಗಿ ಮದ್ರಾಸ್‌ ಹೈಕೋರ್ಟ್‌ ನೀಡಿರುವ ತೀರ್ಪೊಂದನ್ನು ತಾವು ಆಧರಿಸುತ್ತಿರುವುದಾಗಿ ತಿಳಿಸಿದರು.

ಅಂತಿಮವಾಗಿ ನ್ಯಾಯಮೂರ್ತಿಗಳು ಬಾಬಾ ರಾಮ್‌ದೇವ್ ಅವರಿಗೆ ಪ್ರಕರಣದ ಸಂಬಂಧ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿ ನೋಟಿಸ್‌ ನೀಡಿದರು. ಪ್ರತಿವಾದಿಗಳು ಒಂದು ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದರು. ರಾಮ್‌ ದೇವ್‌ ಅವರ ಪರ ಹಿರಿಯ ವಕೀಲ ರಾಜೀವ್ ನಾಯರ್‌ ಹಾಜರಿದ್ದರು.

ಪ್ರಕರಣದ ವಿಚಾರಣೆಯನ್ನು ಆ.10ಕ್ಕೆ ಮುಂದೂಡಲಾಗಿದೆ.