Disha Ravi and Delhi HC
Disha Ravi and Delhi HC  
ಸುದ್ದಿಗಳು

ಟೂಲ್‌ಕಿಟ್‌ ಪ್ರಕರಣದ ಎಫ್ಐಆರ್ ಸೋರಿಕೆ: ಎನ್ಎಸ್‌ಬಿಎ, ನ್ಯೂಸ್ 18, ಟೈಮ್ಸ್ ನೌಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್‌

Bar & Bench

ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ಭಾಗಿಯಾದ ಆರೋಪ ಕೇಳಿಬರುತ್ತಿರುವ ಟೂಲ್‌ಕಿಟ್‌ ಪ್ರಕರಣದ ಎಫ್‌ಐಆರ್‌ ಸೋರಿಕೆಯಾದ ಹಿನ್ನಲೆಯಲ್ಲಿ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್‌ಎಸ್‌ಬಿಎ), ಸುದ್ದಿ ವಾಹಿನಿಗಳಾದ ನ್ಯೂಸ್ 18, ಟೈಮ್ಸ್ ನೌಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್‌ ನೋಟಿಸ್‌ ನೀಡಿದೆ. ಪ್ರತಿವಾದಿಗಳಲ್ಲಿ ಒಂದಾದ ಇಂಡಿಯಾ ಟುಡೇ ಸಂಸ್ಥೆಯನ್ನು ಈಗಾಗಲೇ ವಕೀಲ ಹೃಷಿಕೇಶ್‌ ಬರುವಾ ಪ್ರತಿನಿಧಿಸುತ್ತಿದ್ದಾರೆ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿತು.

ದಿಶಾ ಪರ ಹಾಜರಾದ ಹಿರಿಯ ವಕೀಲ ಅಖಿಲ್‌ ಸಿಬಲ್‌ 21 ವರ್ಷದ ಬಾಲಕಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು ಅದಂದಿನಿಂದಲೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠಕ್ಕೆ ಮಾಹಿತಿ ನೀಡಿದರು. ಆಕೆಯ ಬಂಧನದ ಕುರಿತಾದ ವರದಿಗಾರಿಕೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಸಿಬಲ್, "ಪೊಲೀಸರು ಮಾಹಿತಿ ಸೋರಿಕೆಯ ಲೋಪದ ಪ್ರೇರಕ ಶಕ್ತಿಯಾಗಿ ಕಾಣುತ್ತಿದ್ದಾರೆ. ಇದನ್ನು ಸಹಿಸಲಾಗದು. ನ್ಯಾಯಾಲಯ ಇದನ್ನು ಗಮನಿಸಿದೆ..." ಎಂದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಜೊತೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಪೊಲೀಸರಿಂದ ಯಾವುದೇ ಸೋರಿಕೆ ನಡೆದಿಲ್ಲ ಎಂದು ಮಾಹಿತಿ ನೀಡಿದರು. ಪ್ರಸ್ತುತ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಅಗತ್ಯ ಪಕ್ಷಕಾರನಲ್ಲ ಎಂದು ಕೂಡ ಅವರು ಹೇಳಿದರು. ಅಲ್ಲದೆ ಮಾಧ್ಯಮಗಳ ಗಮನ ಸೆಳೆಯಲು ಅರ್ಜಿ ಹಾಕಲಾಗಿದೆ ಎಂದು ದೂರಿದರು.

ಮೆಹ್ತಾ ಅವರ ವಾದವನ್ನು ದಾಖಲಿಸಿಕೊಂಡ ನ್ಯಾಯಾಲಯ ದೆಹಲಿ ಪೊಲೀಸರು ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿತು. ಪ್ರಕರಣವನ್ನು ನಾಳೆ (ಶುಕ್ರವಾರ) ವಿಚಾರಣೆಗೆ ನಿಗದಿಪಡಿಸಲಾಗಿದೆ.

ವಕೀಲರಾಗಿದ್ದ ಅವಧಿಯಲ್ಲಿ ತಾವು ಟೈಮ್ಸ್‌ನೌ ಪರ ವಾದ ಮಂಡಿಸಿದ್ದನ್ನು ನ್ಯಾಯಮೂರ್ತಿ ಸಿಂಗ್ ಈ ಸಂದರ್ಭದಲ್ಲಿ ಬಹಿರಂಗಪಡಿಸಿದರು. ಪಕ್ಷಗಳಿಗೆ ಈ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿದುಬಂದ ನಂತರ ಅರ್ಜಿಯನ್ನು ಆಲಿಸಲಾಯಿತು. ಸೋರಿಕೆಯಾದ ಎಫ್‌ಐಆರ್‌ನಿಂದಾಗಿ ತಾನು ದೆಹಲಿ ಪೊಲೀಸರು ಮತ್ತು ಮಾಧ್ಯಮಗಳ ದಾಳಿಗೆ ತುತ್ತಾದೆ ಎಂದು ದಿಶಾ ಅರ್ಜಿಯಲ್ಲಿ ಹೇಳಿಕೊಂಡಿದ್ದರು. ದಿಶಾ ಅವರ ಪೊಲೀಸ್‌ ಕಸ್ಟಡಿ ಅವಧಿ ಶುಕ್ರವಾರಕ್ಕೆ ಅಂತ್ಯಗೊಳ್ಳಲಿದೆ.