ವೈದ್ಯಕೀಯ ಕಾಲೇಜು ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, ಪದವಿ (ನೀಟ್- ಯುಜಿ) ಪರೀಕ್ಷೆಗಳಲ್ಲಿ ಕೃಪಾಂಕ ನೀಡುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಿರ್ಧಾರ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ [ಶ್ರೇಯಾನ್ಸಿ ಠಾಕೂರ್ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡುವಣ ಪ್ರಕರಣ].
ಶುಕ್ರವಾರ ಪ್ರಕರಣ ಆಲಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರಿದ್ದ ರಜಾಕಾಲೀನ ಪೀಠ ಪ್ರಕರಣದ ಕುರಿತು ಸೂಚನೆ ಪಡೆಯುವ ನಿಟ್ಟಿನಲ್ಲಿ ಎನ್‌ಟಿಎ ಪರ ವಕೀಲರಿಗೆ ಸಮಯಾವಕಾಶ ನೀಡಿತು. ಬುಧವಾರ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಕೃಪಾಂಕಗಳನ್ನು ನೀಡುವ ಎನ್‌ಟಿಎ ನಿರ್ಧಾರ ಮನಸೋಇಚ್ಛೆಯಿಂದ ಕೂಡಿದ್ದು ಸಾವಿರಾರು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿ ಶ್ರೇಯಾನ್ಸಿ ಠಾಕೂರ್ ಎಂಬ 17 ವರ್ಷದ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೇ ತಿಂಗಳಲ್ಲಿ ನಡೆದ ನೀಟ್ ಯುಜಿ ಪರೀಕ್ಷೆ ವೇಳೆ ಬುಕ್‌ಲೆಟ್ ಕೋಡ್ R5 ರ ಪ್ರಶ್ನೆ ಸಂಖ್ಯೆ 29 ರಲ್ಲಿ2 ಮತ್ತು 4 ಎರಡೂ ಬಹುಮಾದರಿ ಉತ್ತರ ಸರಿ ಎಂದು ಕಂಡುಬಂದಿತ್ತು. ಆದರೆ ಬಹು ಆಯ್ಕೆಯ ಪ್ರಶ್ನೆಗಳಿದ್ದಾಗ ಒಂದು ಸರಿಯಾದ ಉತ್ತರ ಗುರುತಿಸಬೇಕು ಎಂಬ ಪರೀಕ್ಷಾ ನಿಯಮಾವಳಿಗೆ ಇದು ವ್ಯತಿರಿಕ್ತ ಎನ್ನಲಾಗಿತ್ತು. ಹೀಗಾಗಿ ಈ ಎರಡೂ ಉತ್ತರಗಳಲ್ಲಿ ಯಾವುದಾದರೂ ಒಂದಕ್ಕೆ ಗುರುತು ಹಾಕಿದವರಿಗೆ ಅಂಕ ನೀಡಲು ಎನ್‌ಟಿಎ ನಿರ್ಧರಿಸಿತ್ತು.
ಆದರೆ ಪರೀಕ್ಷಾ ನಿಯಮಗಳಿಗೆ ಕಟ್ಟುಬಿದ್ದು ಎರಡು ಉತ್ತರ ಇದ್ದುದರಿಂದ ಯಾವುದೇ ಉತ್ತರ ಗುರುತಿಸದೆ ಖಾಲಿ ಬಿಟ್ಟವರಿಗೆ ಇದು ತಾರತಮ್ಯ ಉಂಟು ಮಾಡುತ್ತದೆ. ಅಲ್ಲದೆ ಉತ್ತರ ಗುರುತಿಸಲು ವಿವೇಚನೆ ಬಳಸದ ಅನೇಕ ಅಭ್ಯರ್ಥಿಗಳಿಗೂ ಎನ್‌ಟಿಎಯ ಕೃಪಾಂಕ ನಿರ್ಧಾರ ಲಾಭ ಮಾಡಿಕೊಡುತ್ತದೆ. ಆದರೆ ಪ್ರಯೋಜನ ಪಡೆಯದ ಎಲ್ಲಾ ಅಭ್ಯರ್ಥಿಗಳ ಹಕ್ಕುಗಳನ್ನು ಇದು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು.
ಕಲ್ಕತ್ತಾ ಹೈಕೋರ್ಟ್ ಕೂಡ ವಿಚಾರಣೆ
ಜೂನ್ 4 ರಂದು ಪ್ರಕಟವಾದ ನೀಟ್ ಯುಜಿ ಪರೀಕ್ಷೆ ಫಲಿತಾಂಶ ವಿವಾದಕ್ಕೆ ಕಾರಣವಾಗಿದ್ದು 67 ವಿದ್ಯಾರ್ಥಿಗಳು 720ಕ್ಕೆ 720ರಷ್ಟು ಸಂಪೂರ್ಣ ಅಂಕಗಳಿಸಿ ಮೊದಲ ರ‍್ಯಾಂಕ್ ಪಡೆದಿರುವುದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಒಂದೇ ಪರೀಕ್ಷಾ ಕೇಂದ್ರದ ಆರು ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಗಳಿಸಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ. ಪರಿಪೂರ್ಣ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪೈಕಿ 44 ವಿದ್ಯಾರ್ಥಿಗಳು ಭೌತಶಾಸ್ತ್ರದ ಪ್ರಶ್ನೆಗೆ ತಪ್ಪಾಗಿ ಉತ್ತರಿಸಿಯೂ ಕೃಪಾಂಕ ಪಡೆದಿದ್ದರಿಂದ ಹೆಚ್ಚಿನ ಅಂಕ ಅವರದ್ದಾಗಿದೆ ಎಂದು ವರದಿಯಾಗಿದೆ. ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಈಗಾಗಲೇ ಪಿಐಎಲ್ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 6 ರಂದು, ಎನ್‌ಟಿಎ ಪ್ರತಿಕ್ರಿಯೆ ಕೇಳಿರುವ ಕಲ್ಕತ್ತಾ ಹೈಕೋರ್ಟ್ ಎರಡು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಅಲ್ಲಿಯವರೆಗೆ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿರಿಸುವಂತೆ ಅದು ಪರೀಕ್ಷಾ ಸಂಸ್ಥೆಗೆ ಸೂಚಿಸಿದೆ.