ಮೂವಿ ಥಿಯೇಟರ್
ಮೂವಿ ಥಿಯೇಟರ್ 
ಸುದ್ದಿಗಳು

ವಿಕಲಚೇತನರೂ ಚಲನಚಿತ್ರ, ಒಟಿಟಿ ಕಾರ್ಯಕ್ರಮ ಆನಂದಿಸಲು ಅವಕಾಶ: ಮಾರ್ಗಸೂಚಿಗಾಗಿ ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ಆದೇಶ

Bar & Bench

ಶ್ರವಣ ಮತ್ತು ದೃಷ್ಟಿದೋಷ ಇರುವ ವ್ಯಕ್ತಿಗಳು ಚಲನಚಿತ್ರ ಮಂದಿರಗಳಲ್ಲಿ ಮತ್ತು ಓವರ್-ದಿ-ಟಾಪ್ (ಒಟಿಟಿ) ವೇದಿಕೆಗಳಲ್ಲಿ ಚಲನಚಿತ್ರ, ವೆಬ್‌ ಸರಣಿ ಹಾಗೂ ಆ ಬಗೆಯ ಕಾರ್ಯಕ್ರಮ ಆನಂದಿಸಲು ಅನುವಾಗುವಂತೆ ಪ್ರವೇಶಾವಕಾಶ ಮಾರ್ಗಸೂಚಿ ರೂಪಿಸಿ ಜುಲೈ 15, 2024ರೊಳಗೆ ಅಧಿಸೂಚನೆ ಹೊರಡಿಸುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಆದೇಶಿಸಿದೆ [ಅಕ್ಷತ್‌ ಬಾಲ್ಡ್ವಾ ಮತ್ತಿತರರು ಹಾಗೂ ಯಶ್‌ ರಾಜ್‌ ಫಿಲಮ್ಸ್‌ ಇನ್ನಿತರರ ನಡುವಣ ಪ್ರಕರಣ].

ವಿಕಲಚೇತನರು ಚಲನಚಿತ್ರ, ಒಟಿಟಿ ಕಾರ್ಯಕ್ರಮ ಆನಂದಿಸುವಂತಹ ವೈಶಿಷ್ಟ್ಯಗಳಿರುವ ನಿಬಂಧನೆಯನ್ನು ಕಡ್ಡಾಯಗೊಳಿಸಬೇಕು ಮತ್ತು ಎಲ್ಲಾ ಮಧ್ಯಸ್ಥದಾರರು ಅದನ್ನು ಪಾಲಿಸಲು ಸೂಕ್ತ ಕಾಲಾವಕಾಶ ಒದಗಿಸಬೇಕು ಎಂದು ಮಾರ್ಚ್ 15ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ತಿಳಿಸಿದ್ದಾರೆ.

ಒಂದು ವೇಳೆ ಜುಲೈ 15ರೊಳಗೆ ಅಧಿಸೂಚನೆ ಹೊರಡಿಸದಿದ್ದರೆ, ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಪೀಠ ಹೇಳಿದೆ.

ನ್ಯಾಯಮೂರ್ತಿ ಪ್ರತಿಭಾ ಸಿಂಗ್

ಸಿನಿಮಾ ಮತ್ತಿತರ ಪ್ರದರ್ಶನಗಳನ್ನು ವಿಕಲಚೇತನರಿಗೂ ಲಭ್ಯವಾಗುವಂತೆ ಚಲನಚಿತ್ರ ಮಂದಿರಗಳು ಮತ್ತು ಒಟಿಟಿ ವೇದಿಕೆಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ವಿಕಲಚೇತನರು ಮತ್ತು ಅಂಗವೈಕಲ್ಯ ಹಕ್ಕುಗಳ ಹೋರಾಟಗಾರರ ಗುಂಪು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿಂಗ್ ಈ ಆದೇಶ ಹೊರಡಿಸಿದ್ದಾರೆ.

ಕರಡು ಮಾರ್ಗಸೂಚಿಗಳನ್ನು ಎಂಐಬಿ ಈಗಾಗಲೇ ಪ್ರಕಟಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ವಾದ ಪರಿಗಣಿಸಿದ ನ್ಯಾಯಾಲಯ ವಿಕಲಚೇತನರಿಗೆ ಪ್ರವೇಶಾವಕಾಶ ನಿರ್ಣಾಯಕವಾಗಿದ್ದು ಕಾನೂನುಬದ್ಧ ಹಕ್ಕಾಗಿ ಅದನ್ನು ಜಾರಿಗೊಳಿಸಬಹುದು. ಖಾಸಗಿ ಪಕ್ಷಕಾರರು ಕೂಡ ವಿಕಲಚೇತನರಿಗೆ ಸೂಕ್ತ ಪ್ರವೇಶಾವಕಾಶ ದೊರೆಯುವಂತೆ ನೋಡಿಕೊಳ್ಳಬೇಕು ಎಂದಿತು.

ಅಂಗವಿಕಲರ ಪ್ರಾತಿನಿಧ್ಯ ಕಾಯಿದೆಯನ್ನು 2016ರಲ್ಲಿ ಜಾರಿಗೆ ತರಲಾಗಿದ್ದು ಅದರ ಪ್ರಕಾರ, ಚಲನಚಿತ್ರ, ಒಟಿಟಿ ವಸ್ತುವಿಷಯ ಆನಂದಿಸುವುದಕ್ಕಾಗಿ ಸಿನಿಮಾ ವೈಶಿಷ್ಟ್ಯಗಳನ್ನು ಒದಗಿಸದಿರುವುದು ಅಪರಾಧವಾಗುತ್ತದೆ ಎಂದು ಪೀಠ ತಿಳಿಸಿತು.

ಆದ್ದರಿಂದ ಗಡುವಿನೊಳಗೆ ಮಾರ್ಗಸೂಚಿ ಪ್ರಕಟಿಸಬೇಕು. ಅದು ಪ್ರಕಟವಾದ ಬಳಿಕ ಅರ್ಜಿದಾರರು ಅಥವಾ ಯಾವುದೇ ಭಾಗೀದಾರರು ಪರಿಹಾರ ಪಡೆಯಬಹುದು ಎಂದಿತು.

ವಿಕಲಚೇತನರಿಗೆ ವಿಚಾರಣೆಯ ವಿವರಗಳನ್ನು ಒದಗಿಸುತ್ತಿದ್ದ ಸಂಜ್ಞಾಭಾಷೆ ವ್ಯಾಖ್ಯಾನಕಾರರರ ಬಗ್ಗೆ ನ್ಯಾಯಾಲಯ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Akshat Baldwa & Ors v Yash Raj Films & Ors.pdf
Preview