ಉದ್ಯಮಿ ಕಲಾನಿಧಿ ಮಾರನ್ ಮತ್ತು ಅವರ ಕೆಎಎಲ್ ಏರ್‌ವೇಸ್‌ಗೆ ಸೆಪ್ಟೆಂಬರ್ 10ರೊಳಗೆ ₹100 ಕೋಟಿ ಪಾವತಿಸುವಂತೆ ಸ್ಪೈಸ್‌ಜೆಟ್ ಹಾಗೂ ಅದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಅಜಯ್ ಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮಂಡಳಿಯ ತೀರ್ಪನ್ನು ತಮ್ಮ ಪರವಾಗಿ ಜಾರಿಗೊಳಿಸುವಂತೆ ಕೋರಿ ಮಾರನ್ ಮತ್ತು ಕೆಎಎಲ್ ಏರ್‌ವೇಸ್ ಸಲ್ಲಿಸಿದ್ದ ಅನುಷ್ಠಾನ ಅರ್ಜಿಯಲ್ಲಿ ನ್ಯಾಯಮೂರ್ತಿ ಯೋಗೇಶ್ ಖನ್ನಾ ಈ ಆದೇಶ ನೀಡಿದ್ದಾರೆ. ನ್ಯಾಯಾಲಯ ಸೆಪ್ಟೆಂಬರ್ 11ರಂದು ಪ್ರಕರಣದ ವಿಚಾರಣೆ ನಡೆಸಲಿದೆ.
ಜುಲೈ 2018ರಲ್ಲಿ ಮಧ್ಯಸ್ಥಿಕೆ ತೀರ್ಪು ನೀಡಲಾಗಿದ್ದು ಮಾರನ್ ಅವರಿಗೆ ₹270 ಕೋಟಿ ಮರುಪಾವತಿ ಮಾಡುವಂತೆ ಸ್ಪೈಸ್‌ಜೆಟ್‌ಗೆ ಆದೇಶಿಸಲಾಗಿತ್ತು. ವಾರಂಟ್‌ಗಳಿಗೆ ಪಾವತಿಸಿದ ಮೊತ್ತದ ಮೇಲೆ ವಾರ್ಷಿಕ ಶೇ 12ರಷ್ಟು ಮತ್ತು ಮಾರನ್ ಅವರಿಗೆ ಪಾವತಿಸಬೇಕಾದ ಮೊತ್ತದ ಮೇಲೆ ವಾರ್ಷಿಕ ಶೇ 18ರಷ್ಟು ಬಡ್ಡಿಯನ್ನು ಸೂಕ್ತ ಸಮಯದೊಳಗೆ ಪಾವತಿಸದಿದ್ದರೆ ನೀಡಬೇಕು ಎಂದು ನ್ಯಾಯಮಂಡಳಿ ಏರ್‌ಲೈನ್‌ಗೆ ಆದೇಶಿಸಿತ್ತು.
ಹೈಕೋರ್ಟ್ ಏಕಸದಸ್ಯ ಪೀಠ ಜುಲೈ 31, 2023ರಂದು ತೀರ್ಪಿನ ಸಿಂಧುತ್ವ ಎತ್ತಿಹಿಡಿದಿತ್ತು. ಇದನ್ನು ವಿಭಾಗೀಯ ಪೀಠದ ಮುಂದೆ ಸ್ಪೈಸ್‌ಜೆಟ್ ಪ್ರಶ್ನಿಸಿತ್ತು. ಆದರೆ, ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಾಗ ವಿಭಾಗೀಯ ಪೀಠ ತೀರ್ಪಿಗೆ ತಡೆ ನೀಡಲು ನಿರಾಕರಿಸಿತು.
ಕಲಾನಿಧಿ ಮಾರನ್‌ಗೆ ₹ 100 ಕೋಟಿ ಪಾವತಿಸಲು ಸ್ಪೈಸ್‌ಜೆಟ್ ವಿಫಲವಾದರೆ, ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಯೋಚಿಸಬಹುದು ಎಂದು ಹೈಕೋರ್ಟ್ ಹೇಳಿದೆ. ಮಾರನ್ ಅವರಿಗೆ ಸ್ಪೈಸ್‌ಜೆಟ್ ಹೇಗೆ ಹಣ ಪಾವತಿಸುತ್ತದೆ ಎಂಬ ಬಗ್ಗೆ ಮಾತ್ರ ತನಗೆ ಕಾಳಜಿ ಇದೆ ಎಂದು ನ್ಯಾ. ಖನ್ನಾ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.