Sunita Kejriwal, Delhi High Court 
ಸುದ್ದಿಗಳು

ನ್ಯಾಯಾಲಯ ಉದ್ದೇಶಿಸಿ ಮಾತು: ಕೇಜ್ರಿವಾಲ್ ವಿಡಿಯೋ ತೆಗೆದುಹಾಕಲು ಸುನೀತಾ ಹಾಗೂ ಜಾಲತಾಣಗಳಿಗೆ ದೆಹಲಿ ಹೈಕೋರ್ಟ್ ಆದೇಶ

ಅರವಿಂದ್ ಕೇಜ್ರಿವಾಲ್ ಮಾರ್ಚ್ 28ರಂದು ನ್ಯಾಯಾಲಯವನ್ನು ಖುದ್ದು ಉದ್ದೇಶಿಸಿ ಮಾತನಾಡಿದ್ದರು. ಅವರ ಪತ್ನಿ ಟ್ವಿಟ್ಟರ್‌ನಲ್ಲಿ (ಎಕ್ಸ್) ಈ ವಿಡಿಯೋ ಮರುಟ್ವೀಟ್ ಮಾಡಿದ್ದರು.

Bar & Bench

ಮದ್ಯ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು  ನ್ಯಾಯಾಲಯ ಉದ್ದೇಶಿಸಿ ಆಡಿದ್ದ ಮಾತುಗಳ ವಿಡಿಯೋವನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಶನಿವಾರ ಆದೇಶಿಸಿದೆ [ವೈಭವ್ ಸಿಂಗ್ ಮತ್ತು ಸುನೀತಾ ಕೇಜ್ರಿವಾಲ್ ಇನ್ನಿತರರ ನಡುವಣ ಪ್ರಕರಣ]

ಎಕ್ಸ್‌ (ಟ್ವಿಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ ರೀತಿಯ ಸಾಮಾಜಿಕ ಮಾಧ್ಯಮ ಕಂಪನಿಗಳಿಗೂ ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಕೃಷ್ಣ ಮತ್ತು ಅಮಿತ್ ಶರ್ಮಾ ಅವರ ವಿಭಾಗೀಯ ಪೀಠ ವಿಡಿಯೋವನ್ನು ತೆಗೆದು ಹಾಕಲು ಆದೇಶಿಸಿದೆ.

ವಕೀಲ ವೈಭವ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಆಲಿಸಿದ ನ್ಯಾಯಾಲಯ ವಿಡಿಯೋ ಪ್ರಸಾರ ಮಾಡಿದ್ದ ಸುನೀತಾ ಕೇಜ್ರಿವಾಲ್, ಸಾಮಾಜಿಕ ಮಾಧ್ಯಮ ವೇದಿಕೆಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆದಾರರಿಗೆ ನೋಟಿಸ್ ನೀಡಿದೆ.

ಸುನೀತಾ ಅಗರ್‌ವಾಲ್‌ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಮತ್ತಿತರ ವಿರೋಧ ಪಕ್ಷಗಳಿಗೆ ಸಂಬಂಧಿಸಿದ ಹಲವರು ಸಾಮಾಜಿಕ ಮಾಧ್ಯಮ ಖಾತೆಗಳು ನ್ಯಾಯಾಲಯದ ಕಲಾಪಗಳ ವಿಡಿಯೋ/ಆಡಿಯೋ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿವೆ ಎಂದು ಸಿಂಗ್ ದೂರಿದ್ದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರೆದುರು ಹಾಜರುಪಡಿಸಿದ್ದ ವೇಳೆ ಕೇಜ್ರಿವಾಲ್‌ ನ್ಯಾಯಾಲಯ ಉದ್ದೇಶಿಸಿ ಖುದ್ದು ಮಾತನಾಡಿದ್ದರು. ಬಿಜೆಪಿ ಪರ ಇ ಡಿ ಸುಲಿಗೆ ದಂಧೆ ನಡೆಸುತ್ತಿದೆ ಎಂದು ದೂರಿದ್ದರು.

ನ್ಯಾಯಾಲಯಗಳ ವೀಡಿಯೋ ಕಾನ್ಫರೆನ್ಸಿಂಗ್ ದೆಹಲಿಯ ಹೈಕೋರ್ಟ್ ನಿಯಮಾವಳಿ 2021ರ ಪ್ರಕಾರ ನ್ಯಾಯಾಲಯದ ವಿಚಾರಣೆ ರೆಕಾರ್ಡ್ ಮಾಡುವುದನ್ನು ನಿಷೇಧಿಸಲಾಗಿದ್ದು ಈ ವೀಡಿಯೊಗಳನ್ನು ವೈರಲ್ ಮಾಡುವುದು ನ್ಯಾಯಾಂಗ ಮತ್ತು ನ್ಯಾಯಾಧೀಶರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯತ್ನವಾಗಿದೆ ಎಂದು ವಕೀಲ ವೈಭವ್‌ ಸಿಂಗ್‌ ಅವರು ದೂರಿದ್ದರು. ಘಟನೆಯ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುವಂತೆ ಅವರು ಕೋರಿದ್ದರು.