ಐಕಿಯ 
ಸುದ್ದಿಗಳು

ಐಕಿಯ ವಾಣಿಜ್ಯ ಚಿಹ್ನೆ ಬಳಸಿ ವಂಚನೆ: ಜಾಲತಾಣ, ಆ್ಯಪ್‌, ವಾಟ್ಸಾಪ್ ಖಾತೆ ತೆರವಿಗೆ ದೆಹಲಿ ಹೈಕೋರ್ಟ್ ಆದೇಶ

ಜನರು ಹೂಡಿದ ಹಣಕ್ಕೆ ಖಾತರಿ ಇದೆ ಎಂದು ನಂಬಿಸಲು ವಂಚಕರು ತನ್ನ ವಾಣಿಜ್ಯ ಚಿಹ್ನೆ ಬಳಸುತ್ತಿದ್ದಾರೆ ಎಂದು ನ್ಯಾಯಾಲಯದೆದುರು ಐಕಿಯ ಅಳಲು ತೊಡಿಕೊಂಡಿತ್ತು.

Bar & Bench

ಸ್ವೀಡನ್ ಮೂಲದ ಗೃಹಬಳಕೆ ಪೀಠೋಪಕರಣಗಳ ಮಾರಾಟ ಮಳಿಗೆ ‘ಐಕಿಯ’ದ ವಾಣಿಜ್ಯ ಚಿಹ್ನೆ ಬಳಸಿ ಜನರನ್ನು ವಂಚಿಸುತ್ತಿರುವ ಜಾಲತಾಣ, ಆ್ಯಪ್‌, ವಾಟ್ಸಾಪ್ ಖಾತೆ, ವಾಟ್ಸಾಪ್‌ ಗ್ರೂಪ್‌ಗಳು ಹಾಗೂ ಫೋನ್‌ ಸಂಖ್ಯೆಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್‌ ಈಚೆಗೆ ಆದೇಶಿಸಿದೆ (ಇಂಟರ್ ಐಕೆಇಎ ಸಿಸ್ಟಮ್ಸ್ ಬಿವಿ ಮತ್ತು ಅಪರಿಚತರು ಹಾಗೂ ಇನ್ನಿತರರ ನಡುವಣ ಪ್ರಕರಣ).

ಅಪರಿಚಿತರು ತಮ್ಮ ಡೊಮೇನ್‌, ಜಾಲತಾಣ, ಆ್ಯಪ್‌ ಹಾಗೂ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಐಕಿಯಾ ವಾಣಿಜ್ಯ ಚಿಹ್ನೆ ಬಳಸುವುದನ್ನು ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಮಾರ್ಚ್ 12 ರಂದು ಹೊರಡಿಸಿದ ಆದೇಶದಲ್ಲಿ ನಿರ್ಬಂಧಿಸಿದ್ದಾರೆ.

ಅಂತಹ ಜಾಲತಾಣ ನಿರ್ವಹಿಸುತ್ತಿರುವವರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆಯೂ ಪೀಠ ಸೂಚಿಸಿದೆ.

ನ್ಯಾ. ಸಂಜೀವ್ ನರುಲಾ

ಜನರನ್ನು ವಂಚಿಸುವುದಕ್ಕಾಗಿ ಅಪರಿಚಿತರು ತನ್ನ ಹೆಸರು ಮತ್ತು ವಾಣಿಜ್ಯ ಚಿಹ್ನೆ ಬಳಸುತ್ತಿದ್ದು ಸಾಮಾನ್ಯ ಜನ ಭಾರೀ ಪ್ರಮಾಣದ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ಐಕಿಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಐಕಿಯದಿಂದ ಸ್ಥಿರ ಆದಾಯ ದೊರೆಯಲಿದೆ, ಹೂಡಿಕೆ ಮಾಡಿದ ಹಣ 35 ದಿನಗಳಲ್ಲಿ 200% ದ್ವಿಗುಣಗೊಳ್ಳುತ್ತದೆ ಎಂದು ನೆಪ ಹೇಳಿ ಭಾರಿ ಮೊತ್ತ ಹೂಡಿಕೆ ಮಾಡುವಂತೆ ಜನರನ್ನು ದಿಕ್ಕುತಪ್ಪಿಸಲಾಗುತ್ತಿತ್ತು. ಇದಕ್ಕಾಗಿ ನಕಲಿ ಜಾಲತಾಣಗಳು ಮತ್ತು ಆಪ್‌ಗಳನ್ನು ಹಣ ಸುಲಿಗೆ ಮಾಡುವ ವೇದಿಕೆಗಳಾಗಿ ಬಳಸಲಾಗುತ್ತಿತ್ತು ಎಂದು ಐಕಿಯ ದೂರಿತ್ತು.

ವಾದ ಆಲಿಸಿದ ನ್ಯಾಯಾಲಯ ಪ್ರತಿವಾದಿಗಳು ವಾಣಿಜ್ಯ ಚಿಹ್ನೆ ಉಲ್ಲಂಘಿಸಿದ್ದು ಐಕಿಯಾದ ಬಗೆಗಿನ ಸದ್ಭಾವನೆ ಮತ್ತು ಮಾರುಕಟ್ಟೆಯಲ್ಲಿ ಅದರ ಸ್ಥಾನಮಾನಕ್ಕೆ ಧಕ್ಕೆ ಒದಗಿಸಿದೆ ಎಂದು ತಿಳಿಸಿ ಮಧ್ಯಂತರ ಆದೇಶ ಹೊರಡಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Inter IKEA Systems BV v John Deo And Ors.pdf
Preview