ನವದೆಹಲಿಯ ಕೇಂದ್ರೀಯ ವಿಶ್ವವಿದ್ಯಾಲಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಡಿಸೆಂಬರ್ 2019 ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹೋರಾಟಗಾರರಾದ ಶಾರ್ಜೀಲ್ ಇಮಾಮ್, ಸಫೂರಾ ಜರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಹಾಗೂ ಎಂಟು ಜನರ ಬಿಡುಗಡೆ ಆದೇಶವನ್ನು ದೆಹಲಿ ಹೈಕೋರ್ಟ್ ಮಂಗಳವಾರ ಭಾಗಶಃ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ತಮ್ಮ ಆದೇಶದಲ್ಲಿ "ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸದಿದ್ದರೂ, ಈ ನ್ಯಾಯಾಲಯ ತನ್ನ ಕರ್ತವ್ಯವನ್ನು ಅರಿತು ಆ ರೀತಿಯಲ್ಲಿ ಪ್ರಕರಣವನ್ನು ನಿರ್ಧರಿಸಲು ಯತ್ನಿಸಿದೆ. ಶಾಂತಿಯುತವಾಗಿ ಸಭೆ ಸೇರುವ ಹಕ್ಕು ನಿರ್ಬಂಧಕ್ಕೆ ಒಳಪಟ್ಟಿದೆ. ಆಸ್ತಿ ಮತ್ತು ಶಾಂತಿಗೆ ಧಕ್ಕೆ ತರುವುದಕ್ಕೆ ರಕ್ಷಣೆ ಇರುವುದಿಲ್ಲ” ಎಂದು ವಿವರಿಸಿದ್ದಾರೆ.
ವಿಚಾರಣಾ ನ್ಯಾಯಾಲಯದ ಆದೇಶವನ್ನು ಭಾಗಶಃ ರದ್ದುಗೊಳಿಸಿದ ನ್ಯಾಯಾಲಯ ಇಮಾಮ್, ತನ್ಹಾ ಮತ್ತು ಜರ್ಗರ್ ಸೇರಿದಂತೆ ಹನ್ನೊಂದು ಆರೋಪಿಗಳಲ್ಲಿ ಒಂಬತ್ತು ಮಂದಿಯ ವಿರುದ್ಧ ಗಲಭೆ, ಅಕ್ರಮ ಸಭೆ ಸೇರುವಿಕೆ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಆರೋಪ ನಿಗದಿಪಡಿಸಿತು.
ಐಪಿಸಿ ಸೆಕ್ಷನ್ 143, 147, 149, 186, 353, 427 ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆಯಡಿಯಲ್ಲಿ ಇಮಾಮ್, ಜರ್ಗರ್, ಮೊಹಮ್ಮದ್ ಖಾಸಿಮ್, ಮಹಮೂದ್ ಅನ್ವರ್, ಶಹಜರ್ ರಾಜಾ, ಉಮೈರ್ ಅಹ್ಮದ್, ಮೊಹಮ್ಮದ್ ಬಿಲಾಲ್ ನದೀಮ್ ಹಾಗೂ ಚಂದಾ ಯಾದವ್ ವಿರುದ್ಧ ಆರೋಪ ನಿಗದಿಪಡಿಸಲಾಗಿದೆ.
ಆರೋಪಿಗಳಾದ ಮೊಹಮ್ಮದ್ ಶೋಯೆಬ್ ಮತ್ತು ಮೊಹಮ್ಮದ್ ಅಬುಜಾರ್ ವಿರುದ್ಧ ಐಪಿಸಿ ಸೆಕ್ಷನ್ 143ರ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು ಉಳಿದೆಲ್ಲಾ ಅಪರಾಧಗಳಿಂದ ಮುಕ್ತಗೊಳಿಸಲಾಗಿದೆ.
ತನ್ಹಾ ಅವರನ್ನು ಐಪಿಸಿ ಸೆಕ್ಷನ್ 308, 323, 341 ಮತ್ತು 435ರಿಂದ ಬಿಡುಗಡೆ ಮಾಡಲಾಗಿದೆ. ಅವರ ವಿರುದ್ಧ ಉಳಿದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.
ಪ್ರಸ್ತುತ ಪ್ರಕರಣವು ಡಿಸೆಂಬರ್ 2019 ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಸುತ್ತಮುತ್ತ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದೆ. ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೊಳಿಸುವುದರ ವಿರುದ್ಧ ಪ್ರತಿಭಟಿಸಲು ಕೆಲ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸಂಸತ್‌ನತ್ತ ಮೆರವಣಿಗೆ ಹೊರಡುವುದಾಗಿ ಘೋಷಿಸಿದ ಬಳಿಕ ಹಿಂಸಾಚಾರ ಸಂಭವಿಸಿತ್ತು.