ಭಾರತದಲ್ಲಿ ದೀರ್ಘಾವಧಿಯ ವೀಸಾ ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ಪಾಕಿಸ್ತಾನಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶನಿವಾರ ತಿರಸ್ಕರಿಸಿದೆ [ಶೀನಾ ನಾಜ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ] .
ಶೀನಾ ನಾಜ್ ಎಂಬ ಮಹಿಳೆ ಭಾರತೀಯ ಪ್ರಜೆಯನ್ನು ಮದುವೆಯಾಗಿದ್ದು, ಏಪ್ರಿಲ್ 23ರಂದು ದೀರ್ಘಾವಧಿಯ ವೀಸಾ ಕೋರಿ ಅರ್ಜಿ ಸಲ್ಲಿಸಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಏಪ್ರಿಲ್ 24ರಂದು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದು ಏಪ್ರಿಲ್ 27ಕ್ಕೂ ಮುನ್ನ ಭಾರತ ತೊರೆಯುವಂತೆ ತಾಕೀತು ಮಾಡಿದೆ.
ಈ ಕಾರಣಕ್ಕೆ ತನ್ನ ದೀರ್ಘಾವಧಿಯ ವೀಸಾ ಅರ್ಜಿ ಪರಗಣಿಸಿ ಮಾರ್ಚ್ 26ರಿಂದ ಮೇ 09ರವರೆಗೆ ಮಾನ್ಯವಾಗಿರುವ ತನ್ನ ವಸತಿ ಪರವಾನಗಿಯನ್ನು ಅಮಾನತುಗೊಳಿಸದಂತೆ ನಿರ್ದೇಶನ ನೀಡುವಂತೆ ಶೀನಾ ಮನವಿ ಮಾಡಿದ್ದರು.
ಶನಿವಾರ ನಡೆದ ವಿಶೇಷ ವಿಚಾರಣೆಯಲ್ಲಿ ನ್ಯಾಯಮೂರ್ತಿ ಸಚಿನ್ ದತ್ತ ಅವರು, ರಾಷ್ಟ್ರೀಯ ಭದ್ರತೆಯ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರ ಕೈಗೊಂಡಿರುವುದರಿಂದ ಅದು ನ್ಯಾಯಾಂಗ ಪರಿಶೀಲನೆಗೆ ಅರ್ಹವಲ್ಲ ಎಂದು ಹೇಳಿದ್ದಾರೆ.
"ಮೇಲ್ನೋಟಕ್ಕೆ, 1946ರ ವಿದೇಶಿಯರ ಕಾಯಿದೆಯ ಸೆಕ್ಷನ್ 3(1)ರ ಅಡಿಯಲ್ಲಿ ಹೊರಡಿಸಲಾದ ಆದೇಶ ನ್ಯಾಯಾಂಗ ಪರಿಶೀಲನೆಗೆ ಅರ್ಹವಲ್ಲ, ಏಕೆಂದರೆ ಗಂಭೀರವಾದ ರಾಷ್ಟ್ರೀಯ ಭದ್ರತಾ ಪರಿಗಣನೆಗಳಿಂದ ಪ್ರೇರಿತವಾಗಿ ಆ ಆದೇಶ ನೀಡಲಾಗಿದೆ. ಅದಕ್ಕೆ ಯಾವುದೇ ವಿನಾಯಿತಿ ನೀಡುವುದು ಈ ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ" ಎಂದು ಪೀಠ ಹೇಳಿದೆ.
ಹೀಗಾಗಿ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜೀವ್ ಸಾಗರ್ ಮತ್ತವರ ತಂಡ ಮನವಿ ಹಿಂಪಡೆಯಿತು. “ಅರ್ಜಿ ಹಿಂಪಡೆದ ಕಾರಣ ಅದನ್ನು ವಜಾಗೊಳಿಸಲಾಗಿದೆ. ಬಾಕಿ ಇರುವ ಅರ್ಜಿಗಳನ್ನು ಕೂಡ ವಿಲೇವಾರಿ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿತು. ಕೇಂದ್ರ ಸರ್ಕಾರದ ಸ್ಥಾಯಿ ವಕೀಲೆ ನಿಧಿ ರಾಮನ್, ವಕೀಲ ಅರ್ನಾವ್ ಮಿತ್ತಲ್ ಕೇಂದ್ರವನ್ನು ಪ್ರತಿನಿಧಿಸಿದ್ದರು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]