A1
ಸುದ್ದಿಗಳು

ಹಾಥ್‌ರಸ್‌ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ: ಮೂವರು ಆರೋಪಿಗಳ ಖುಲಾಸೆಗೊಳಿಸಿದ ಉತ್ತರ ಪ್ರದೇಶ ನ್ಯಾಯಾಲಯ, ಒಬ್ಬ ದೋಷಿ

ಆರೋಪಿಗಳಾದ ರಾಮು, ಲವಕುಶ್ ಮತ್ತು ರವಿ ಅವರನ್ನು ಖುಲಾಸೆಗೊಳಿಸಲಾಗಿದ್ದು, ಆರೋಪಿ ಸಂದೀಪ್‌ನನ್ನು ಕೊಲೆಗೆ ಸಮನಲ್ಲದ ನರಹತ್ಯೆ ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆಯಡಿಯ ಅಪರಾಧಕ್ಕಾಗಿ ದೋಷಿ ಎಂದು ಘೋಷಿಸಲಾಗಿದೆ.

Bar & Bench

ಹತ್ತೊಂಬತ್ತು ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಹಾಥ್‌ರಸ್‌ ಪ್ರಕರಣದಲ್ಲಿ ಉತ್ತರ ಪ್ರದೇಶದ ವಿಶೇಷ ನ್ಯಾಯಾಲಯ ಗುರುವಾರ ಮೂವರನ್ನು ಖುಲಾಸೆಗೊಳಿಸಿ ಒಬ್ಬನನ್ನು ದೋಷಿ ಎಂದು ತೀರ್ಪು ನೀಡಿದೆ.

ಆರೋಪಿಗಳಾದ ರಾಮು, ಲವಕುಶ್ ಮತ್ತು ರವಿ ಅವರನ್ನು ಖುಲಾಸೆಗೊಳಿಸಲಾಗಿದ್ದು, ಆರೋಪಿ ಸಂದೀಪ್‌ನನ್ನು ಕೊಲೆಗೆ ಸಮನಲ್ಲದ ನರಹತ್ಯೆ ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆಯಡಿಯ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಸಂತ್ರಸ್ತೆಯ ಮೇಲೆ ಸೆಪ್ಟೆಂಬರ್ 14, 2020ರಂದು ಹಾಥ್‌ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ನಂತರ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದರು. ಪಾರ್ಥಿವ ಶರೀರವನ್ನು ಮೃತಳ ಊರಿಗೆ ಕೊಂಡೊಯ್ದಾಗ ಉತ್ತರ ಪ್ರದೇಶ ಪೊಲೀಸರು ಮತ್ತು ಅಲ್ಲಿನ ಅಧಿಕಾರಿಗಳು ರಾತ್ರಿ ವೇಳೆ ಕುಟುಂಬದ ಒಪ್ಪಿಗೆ ಅಥವಾ ಅವರ ಉಪಸ್ಥಿತಿಗೂ ಕಾಯದೆ ಆಕೆಯ ದೇಹವನ್ನು ಸುಟ್ಟುಹಾಕಿದ್ದರು.

ಬಲವಂತದ ಶವಸಂಸ್ಕಾರ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್ 1, 2020ರಂದು ಅಲಾಹಾಬಾದ್‌ ಉಚ್ಚ ನ್ಯಾಯಾಲಯ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತ್ತು.

" ಸಂತ್ರಸ್ತೆ 29.09.2020 ರಂದು ಸಾವನ್ನಪ್ಪಿದ ಬಳಿಕ ಆಕೆಯ ಅಂತ್ಯಸಂಸ್ಕಾರಕ್ಕೆ ಕಾರಣವಾದ ಘಟನೆಗಳು ನಮ್ಮ ಆತ್ಮಸಾಕ್ಷಿಯನ್ನು ಘಾಸಿಗೊಳಿಸಿವೆ. ಹೀಗಾಗಿ ನಾವು ಅದನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಲಿದ್ದೇವೆ" ಎಂದು ಅಲಾಹಾಬಾದ್‌ ಹೈಕೋರ್ಟ್ ಹೇಳಿತ್ತು.

ಅಕ್ಟೋಬರ್ 10ರಂದು ಅಲಾಹಾಬಾದ್ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಬಳಿಕ ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಡಿಸೆಂಬರ್ 2020ರಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಮುಕ್ತವಾದ, ನ್ಯಾಯಮೂರ್ತಿಗಳ ಮೇಲ್ವಿಚಾರಣೆಯುಳ್ಳ ತನಿಖೆಯ ಕೋರಿಕೆಯೂ ಸೇರಿದಂತೆ, ಸಾಕ್ಷಿಗಳನ್ನು ರಕ್ಷಿಸುವಂತಹ ವಿವಿಧ ಪರಿಹಾರಗಳನ್ನು ಬಯಸಿ ಅದೇ ವೇಳೆ ಸರ್ವೋಚ್ಚ ನ್ಯಾಯಾಲಯದ ಮುಂದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳೂ ದಾಖಲಾಗಿದ್ದವು.