Jackie Shroff  Facebook
ಸುದ್ದಿಗಳು

ಜಾಕಿ ಶ್ರಾಫ್ ವ್ಯಕ್ತಿತ್ವದ ಹಕ್ಕು ರಕ್ಷಿಸಿದ ದೆಹಲಿ ಹೈಕೋರ್ಟ್: ನಟನ ಹೆಸರು, ಚಿತ್ರ, ಧ್ವನಿ ದುರ್ಬಳಕೆ ಮಾಡದಂತೆ ತಡೆ

ವಿವಿಧ ಆನ್‌ಲೈನ್‌ ವೇದಿಕೆಗಳು ತಮ್ಮ ಸಮ್ಮತಿ ಇಲ್ಲದೆ ತಮ್ಮ ಹೆಸರು, ಧ್ವನಿ ಹಾಗೂ ಚಿತ್ರವನ್ನು ಪ್ರಸಾರ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಜಾಕಿ ಶ್ರಾಫ್ ದೂರಿದ್ದರು.

Bar & Bench

ಬಾಲಿವುಡ್‌ ನಟ ಜಾಕಿ ಶ್ರಾಫ್ ಅವರ ವ್ಯಕ್ತಿತ್ವ ಮತ್ತು ಪ್ರಚಾರ ಹಕ್ಕುಗಳನ್ನು ರಕ್ಷಿಸಿ ಈಚೆಗೆ ಆದೇಶ ಜಾರಿಗೊಳಿಸಿರುವ ದೆಹಲಿ ಹೈಕೋರ್ಟ್‌ ಅವರ ಹೆಸರು ನಟನ ಹೆಸರು, ಧ್ವನಿ ಅಥವಾ ಚಿತ್ರವನ್ನು ದುರುಪಯೋಗಪಡಿಸಿಕೊಳ್ಳದಂತೆ ಸಾಮಾಜಿಕ ಮಾಧ್ಯಮ ಖಾತೆಗಳು, ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್‌ಗಳು ಮತ್ತು ಇ-ಕಾಮರ್ಸ್ ಜಾಲತಾಣಗಳಿಗೆ ನಿರ್ಬಂಧ ಹೇರಿದೆ [ಜೈಕಿಶನ್ ಕಾಕುಭಾಯ್ ಶರಾಫ್‌ ಅಲಿಯಾಸ್‌ ಜಾಕಿ ಶ್ರಾಫ್‌ ಮತ್ತು ದಿ ಪೆಪ್ಪಿ ಸ್ಟೋರ್‌ ಇನ್ನಿತರರ ನಡುವಣ ಪ್ರಕರಣ].

ಅಶ್ಲೀಲ ಸ್ವರೂಪದ ಮತ್ತು ಶ್ರಾಫ್ ಅವರ ಹೆಸರನ್ನು ಬಳಸಿರುವ ಲಿಂಕ್‌ಗಳನ್ನು ಗ್ರೂಪ್‌ಗಳಿಂದ ತೆಗೆದುಹಾಕುವಂತೆ ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಮೇ 15 ರಂದು ನೀಡಿದ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ.

ಖ್ಯಾತನಾಮರಾಗಿರುವ ಶ್ರಾಫ್ ಅವರ ಸ್ಥಾನಮಾನ ಅವರಿಗೆ ವ್ಯಕ್ತಿತ್ವ ಮತ್ತು ಸಂಬಂಧಿತ ಗುಣಲಕ್ಷಣಗಳ ಕುರಿತಂತೆ ಕೆಲವು ಹಕ್ಕುಗಳನ್ನು ನೀಡಿದ್ದು ಕೆಲ ಪ್ರತಿವಾದಿಗಳು ಅನುಮತಿಯಿಲ್ಲದೆ ಅವರ ಹೆಸರು, ಚಿತ್ರ, ಧ್ವನಿ ಹಾಗೂ ಇತರ ವಿಶಿಷ್ಟ ಗುಣಲಕ್ಷಣಗಳನ್ನು ಬಳಸಿದ್ದಾರೆ. ಆ ಮೂಲಕ ಅವರ ವ್ಯಕ್ತಿತ್ವ ಮತ್ತು ಪ್ರಚಾರ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಶ್ರಾಫ್ ಅವರ ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸಿದ ಮತ್ತು ಅವರ ವ್ಯಕ್ತಿತ್ವವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಜಿಫ್‌ ಫೈಲ್‌ ತಯಾರಿಕೆ ವೇದಿಕೆಗಳು, ‘ಭಿಡುʼ ಹೆಸರಿನ ರೆಸ್ಟೋರೆಂಟ್ ಹಾಗೂ ಅನೇಕ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್‌ ನೀಡಿದೆ.

ಅಕ್ಟೋಬರ್ 15 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಶ್ರಾಫ್ ಜಾಕಿ ಶ್ರಾಫ್, ಜಾಕಿ, ಜಗ್ಗು ದಾದಾ ಮತ್ತು ಭಿಡು ಹೆಸರುಗಳಿಗೆ ಸಂಬಂಧಿಸಿದಂತೆ ರಕ್ಷಣೆ ನೀಡಬೇಕು. ತನ್ನ ಅನುಮತಿ ಇಲ್ಲದೆ ತನ್ನ ಗುಣಲಕ್ಷಣಗಳನ್ನು ಬಳಸುವಂತಿಲ್ಲ. ವಿವಿಧ ಆನ್‌ಲೈನ್‌ ವೇದಿಕೆಗಳು ತಮ್ಮ ಸಮ್ಮತಿ ಇಲ್ಲದೆ ತಮ್ಮ ಹೆಸರು, ಧ್ವನಿ ಹಾಗೂ ಚಿತ್ರವನ್ನು ಪ್ರಸಾರ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ತನ್ನ ವ್ಯಕ್ತಿತ್ವದ ಎಲ್ಲಾ ಅಂಶಗಳಿಗೆ ರಕ್ಷಣೆ ನೀಡಬೇಕು ಎಂದು ಕೋರಿ ಶ್ರಾಫ್‌ ನ್ಯಾಯಾಲಯದ ಮೊರೆ ಹೋಗಿದ್ದರು.

ಗಮನಾರ್ಹವಾಗಿ, 2022ರಲ್ಲಿ, ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ವ್ಯಕ್ತಿತ್ವ ಮತ್ತು ಪ್ರಚಾರದ ಹಕ್ಕುಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿತ್ತು.ಮತ್ತೊಂದೆಡೆ ನಟ ಅನಿಲ್ ಕಪೂರ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆಯೂ ಇದೇ ರೀತಿಯ ಆದೇಶ ನೀಡಲಾಗಿತ್ತು.