-
ಗಾಯಕ ಕುಮಾರ್ ಸಾನು ಅವರ ವ್ಯಕ್ತಿತ್ವ ಹಕ್ಕು ದುರುಪಯೋಗಪಡಿಸಿಕೊಳ್ಳದಂತೆ ದೆಹಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ [ಕುಮಾರ್ ಸಾನು ಭಟ್ಟಾಚಾರ್ಜಿ ಮತ್ತು ಜಮ್ಮೇಬಲ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ಮುಂದಿನ ವಿಚಾರಣೆ ನಡೆಯಲಿರುವ ಮಾರ್ಚ್ 30, 2026ರವರೆಗೆ ಈ ತಡೆಯಾಜ್ಞೆ ಜಾರಿಯಲ್ಲಿರಲಿದ್ದು ಸಾನು ಅವರ ಹೆಸರು, ಚಿತ್ರ, ಧ್ವನಿ, ಮುಖದ ರೂಪ, ಹಾಗೂ ಇತರ ವೈಯಕ್ತಿಕ ಲಕ್ಷಣಗಳನ್ನು ವಾಣಿಜ್ಯ ಉದ್ದೇಶಗಳಿಗೆ ಸಂಬಂಧಿಸಿದಂತೆ ದುರುಪಯೋಗಪಡಿಸಿಕೊಳ್ಳದಂತೆ ನ್ಯಾ. ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ತಡೆಹಿಡಿದಿದ್ದಾರೆ.
ಮೇಲ್ನೋಟಕ್ಕೆ ಕುಮಾರ್ ಸಾನು ಅವರ ವ್ಯಕ್ತಿತ್ವದ ಲಕ್ಷಣಗಳು ಅವರ ವ್ಯಕ್ತಿತ್ವ ಹಕ್ಕುಗಳ ರಕ್ಷಿಸಬಹುದಾದ ಅಂಶಗಳಾಗಿವೆ ಎಂದು ನ್ಯಾಯಾಲಯ ಹೇಳಿದೆ . ಬಾಲಿವುಡ್ ಖ್ಯಾತನಾಮರಾದ ಅನಿಲ್ ಕಪೂರ್ , ಕರಣ್ ಜೋಹರ್ ಮತ್ತು ಜಾಕಿ ಶ್ರಾಫ್ ಅವರ ವ್ಯಕ್ತಿತ್ವ ಹಕ್ಕುಗಳಿಗೆ ಸಂಬಂಧಿಸಿದಂತೆ ಇದೇ ರೀತಿಯ ಪ್ರಕರಣಗಳಲ್ಲಿ ಮಾಡಲಾದ ಅವಲೋಕನಗಳನ್ನು ಅದು ಉಲ್ಲೇಖಿಸಿದೆ.
ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ರೀತಿಯ ಇ ವಾಣಿಜ್ಯ ತಾಣಗಳು ಕುಮಾರ್ ಸಾನು ಅವರ ಹೆಸರು/ಚಿತ್ರವನ್ನು ಬಳಸಿದ ನಕಲಿ ಅಥವಾ ಅನಧಿಕೃತ ಉತ್ಪನ್ನಗಳು ಇದ್ದರೆ ಅವುಗಳನ್ನು ತಕ್ಷಣ ತೆಗೆದುಹಾಕಬೇಕು. ಅವರ ಧ್ವನಿ ಅಥವಾ ಚಿತ್ರವನ್ನು ದುರುಪಯೋಗಪಡಿಸಿಕೊಂಡ ಯಾವುದೇ ವಸ್ತುವಿಷಯವನ್ನು, ದೂರು ಬಂದ ತಕ್ಷಣ ತೆಗೆದುಹಾಕುವಂತೆ ಮೆಟಾ ಹಾಗೂ ಗೂಗಲ್ಗೆ ಅದು ನಿರ್ದೇಶಿಸಿತು.
ಅಂತಹ ಉಲ್ಲಂಘನೆಯ ವಸ್ತುವಿಷಯವನ್ನು ಹಂಚಿಕೊಳ್ಳುತ್ತಿರುವ ಅನಾಮಧೇಯ ಖಾತೆಗಳ ಮೂಲ ಚಂದಾದಾರರ ಮಾಹಿತಿಯನ್ನು (ಬಿಎಸ್ಐ) ಮೂರು ವಾರಗಳಲ್ಲಿ ಒದಗಿಸುವಂತೆ ನ್ಯಾಯಾಲಯ ಅವುಗಳಿಗೆ ನಿರ್ದೇಶನ ನೀಡಿತು.
ಅನಧಿಕೃತವಾಗಿ ಕುಮಾರ್ ಸಾನು ಅವರನ್ನು ಬಳಸಿರುವ URL, ವೆಬ್ಸೈಟ್ ಅಥವಾ ಆ್ಯಪ್ಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ದೂರಸಂಪರ್ಕ ಇಲಾಖೆ ನಿಷೇಧಿಸಬೇಕು ಎಂದು ಅದು ಸೂಚಿಸಿತು.
ತಮ್ಮ ಧ್ವನಿ, ಚಿತ್ರ ಹಾಗೂ ಹೆಸರು ಬಳಸಿ ನಕಲಿ ಆ್ಯಪ್ಗಳು, ಜಿಐಎಫ್ಗಳು, ಉತ್ಪನ್ನಗಳು ಮತ್ತು ವಿಡಿಯೋ ಪ್ರಸಾರವಾಗುತ್ತಿರುವ ಕಾರಣಕ್ಕೆ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಗಳು, ಆನ್ಲೈನ್ ಮಧ್ಯವರ್ತಿಗಳು, ಡಿಜಿಟಲ್ ಸಂಸ್ಥೆಗಳ ವಿರುದ್ಧ ₹2 ಕೋಟಿ ಮೊತ್ತದ ಪರಿಹಾರ ಕೋರಿ ಸಾನು ನ್ಯಾಯಾಲಯದ ಮೆಟ್ಟಿಲೇರಿದ್ದರು.