Tattoo  Image for representative purposes
ಸುದ್ದಿಗಳು

ಬಲ ಮುಂಗೈನಲ್ಲಿ ಹಚ್ಚೆ ಇದ್ದರೆ ಸಶಸ್ತ್ರ ಪಡೆಗಳಿಗೆ ಸೇರುವಂತಿಲ್ಲ: ಗೃಹ ಸಚಿವಾಲಯದ ತರ್ಕ ಪ್ರಶ್ನಿಸಿದ ದೆಹಲಿ ಹೈಕೋರ್ಟ್

ಸೇನಾಪಡೆಗಳಲ್ಲಿ ಶಿಸ್ತು ಕಾಯ್ದುಕೊಳ್ಳಲು ಮತ್ತು ಪಾಶ್ಚಾತ್ಯ ಸಂಸ್ಕೃತಿಯಿಂದ ಟ್ಯಾಟೂ ಕಲೆ ತಡೆಯಲು ನಿರ್ಬಂಧ ಹೇರಲಾಗಿದೆ ಎನ್ನುತ್ತದೆ ಗೃಹ ಸಚಿವಾಲಯದ ಮಾರ್ಗಸೂಚಿ.

Bar & Bench

ಬಲ ಮುಂಗೈಗೆ ಹಚ್ಚೆ ಹಾಕಿಸಿಕೊಂಡ ಅಭ್ಯರ್ಥಿಗಳು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಿಗೆ ಸೇರುವುದನ್ನು ನಿಷೇಧಿಸುವ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಕಾನೂನುಬದ್ಧತೆಯನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ [ವಿಪಿನ್ ಕುಮಾರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಎಡ ಮುಂಗೈಯಲ್ಲಿ ಮಾತ್ರ ಹಚ್ಚೆ ಹಾಕಿಸಿಕೊಳ್ಳಲು ಅವಕಾಶವಿದ್ದು, ಅದನ್ನು ಸೆಲ್ಯೂಟ್‌ ಮಾಡದ ಅಂಗವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಅದು ಸೀಮಿತ ಗಾತ್ರದ್ದಾಗಿದ್ದರೆ ಮಾತ್ರ ಅವಕಾಶ ದೊರೆಯುತ್ತದೆ. ಧಾರ್ಮಿಕ ಚಿಹ್ನೆಗಳು ಅಥವಾ ಹೆಸರುಗಳನ್ನು ಹೊಂದಿರುವ ಹಚ್ಚೆಗಳು ಮಾತ್ರ ಸ್ವೀಕಾರಾರ್ಹ ಎಂದು ಕೂಡ ನಿಯಮಾವಳಿ ಹೇಳುತ್ತದೆ. ಸೇನಾಪಡೆಗಳಲ್ಲಿ ಶಿಸ್ತು ಕಾಯ್ದುಕೊಳ್ಳಲು ಮತ್ತು ಪಾಶ್ಚಾತ್ಯ ಸಂಸ್ಕೃತಿಯಿಂದ ಟ್ಯಾಟೂ ಕಲೆ ತಡೆಯಲು ನಿರ್ಬಂಧ ಹೇರಲಾಗಿದೆ ಎಂಬುದಾಗಿ ಸರ್ಕಾರ ತಿಳಿಸಿತ್ತು.

ಆದರೆ ಮಾರ್ಗಸೂಚಿಗಳು ಮೇಲ್ನೋಟಕ್ಕೆ ಪ್ರಶ್ನಾರ್ಹವಾಗಿವೆ ಎಂದು ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

"ಕಾನೂನು ಪ್ರಕಾರ ಮಾರ್ಗಸೂಚಿ ಸಮರ್ಥನೀಯವೇ ಎಂದು ನಾವು ಪ್ರತಿವಾದಿಗಳ ಪರವಾಗಿ ವಾದ ಮಂಡಿಸುತ್ತಿರುವ ರಾಜೇಂದ್ರ ಸಾಹು ಅವರನ್ನು ಪ್ರಶ್ನಿಸಿದ್ದೇವೆ. ಮೇಲ್ನೋಟಕ್ಕೆ ಅರ್ಜಿದಾರರನ್ನು ಅನರ್ಹಗೊಳಿಸುವ ಆಧಾರ ಪ್ರಶ್ನಾರ್ಹವಾಗಿರಬಹುದು ಎಂದು ಭಾವಿಸುತ್ತೇವೆ, ನಿಯಮವನ್ನು ಏಕೆ ಹೊರಡಿಸದೆ ಇರಬಾರದು ಎಂಬುದನ್ನು ವಿವರಿಸುವುದಕ್ಕಾಗಿ ಶೋಕಾಸ್‌ ನೋಟಿಸ್ ನೀಡಿ," ಎಂದು ನ್ಯಾಯಾಲಯ ಆದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 17 ರಂದು ನಡೆಯಲಿದೆ.

ವಿಪಿನ್ ಕುಮಾರ್ ಎಂಬುವವರ ಬಲ ಮುಂಗೈಯಲ್ಲಿ ಹಚ್ಚೆ ಇದ್ದ ಹಿನ್ನೆಲೆಯಲ್ಲಿ ಅವರಿಗೆ ಮೆಕ್ಯಾನಿಕ್‌ ಹುದ್ದೆಗೆ ನೇಮಕಾತಿ ನಿಷೇಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹಚ್ಚೆ ಅನರ್ಹತೆಗೆ ಕಾರಣವಾಗಬಾರದು ಮತ್ತು ಅಗತ್ಯವಿದ್ದರೆ ಅದನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಅವಕಾಶ ನೀಡಬೇಕು ಎಂದು ಅವರು ವಾದಿಸಿದ್ದರು.

ವಾದ ಪರಿಗಣಿಸಿದ ನ್ಯಾಯಾಲಯ ನಿಯಮದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿತು ಜೊತೆಗೆ. ಹಚ್ಚೆ ಇದ್ದ ಮಾತ್ರಕ್ಕೆ ಉದ್ಯೋಗ ನಿರಾಕರಿಸುವುದು ಸೂಕ್ತವಲ್ಲ ಎಂದಿತು.

ಮೇಲಿನ ಮಾರ್ಗಸೂಚಿಯನ್ನು ವಾಚಿಸಿದಾಗ, ದೇಹದ ಸಾಂಪ್ರದಾಯಿಕ ಭಾಗಗಳಲ್ಲಿ, ಉದಾಹರಣೆಗೆ ಮುಂಗೈನ ಒಳಭಾಗದಲ್ಲಿ ಟ್ಯಾಟೂ ಇದ್ದರೆ ಅದನ್ನು ಪ್ರತಿವಾದಿಗಳು ತಪ್ಪೆಂದು ಪರಿಗಣಿಸುತ್ತಿಲ್ಲ. ಟ್ಯಾಟೂ ಎಡ ಮುಂಗೈ ಮೇಲೆ ಇದ್ದರೆ ಅದಕ್ಕೆ ಅವರ ಅಭ್ಯಂತರವಿಲ್ಲ. ಆದರೆ ಬಲ ಮುಂಗೈ ಮೇಲೆ ಇರುವುದನ್ನು ಒಪ್ಪುತ್ತಿಲ್ಲ. ಯುವಕರು ಪಾಶ್ಚಾತ್ಯ ಫ್ಯಾಷನ್ ಮತ್ತು ಟ್ಯಾಟೂ ಸಂಸ್ಕೃತಿಯನ್ನು ಅತಿಯಾಗಿ ಅನುಸರಿಸುತ್ತಿದ್ದಾರೆ ಎಂಬ  ಕಲ್ಪನೆ ಮೇರೆಗೆ ಅವರು ಈ ನಿಯಮ ಜಾರಿಗೆ ತಂದಿರುವಂತಿದೆ” ಎಂದು ನ್ಯಾಯಾಲಯ ವಿವರಿಸಿದೆ.

[ಆದೇಶದ ಪ್ರತಿ]

Vipin_Kumar_v_Union_of_India_and_Ors.pdf
Preview