Christian Michel
Christian Michel 
ಸುದ್ದಿಗಳು

ವಿವಿಐಪಿ ಹೆಲಿಕಾಪ್ಟರ್‌ ಹಗರಣ: ಪ್ರಮುಖ ಆರೋಪಿ ಕ್ರಿಶ್ಚಿಯನ್‌ ಮಿಶೆಲ್‌ ಜಾಮೀನು ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

Bar & Bench

ಬಹುಕೋಟಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದ ಪ್ರಮುಖ ಆರೋಪಿ ಕ್ರಿಶ್ಚಿಯಾನ್‌ ಮಿಶೆಲ್‌ ಜೇಮ್ಸ್ ಜಾಮೀನು ಮನವಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಸುಮಾರು ₹3,600 ಕೋಟಿ ಮೊತ್ತದ ಹಗರಣ ಇದಾಗಿದೆ [ಕ್ರಿಶ್ಚಿಯನ್‌ ಮಿಶೆಲ್‌ ಜೇಮ್ಸ್‌ ವರ್ಸಸ್‌ ಸಿಬಿಐ].

ದೆಹಲಿ ಹೈಕೋರ್ಟ್‌ ನ್ಯಾ. ಮನೋಜ್‌ ಕುಮಾರ್ ಓಹ್ರಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮನವಿಯ ಕುರಿತಾದ ತೀರ್ಪನ್ನು ಪ್ರಕಟಿಸಿತು. ಪ್ರಕರಣದ ತೀರ್ಪನ್ನು ಫೆಬ್ರವರಿ 18ರಂದು ಕಾಯ್ದಿರಿಸಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಕ್ರಿಶ್ಚಿಯನ್‌ ಮಿಶೆಲ್‌ ಜೇಮ್ಸ್‌ ಬ್ರಿಟಿಷ್‌ ನಾಗರಿಕರಾಗಿದ್ದು 2018ರ ಡಿಸೆಂಬರ್‌ನಲ್ಲಿ ಯುಎಇ ರಾಷ್ಟ್ರದಿಂದ ಅವರನ್ನು ವಶಕ್ಕೆ ಪಡೆದು ಭಾರತಕ್ಕೆ ಕರೆತರಲಾಗಿತ್ತು.

ದುಬೈನ ರಾಜಮನೆತನದ ಪುತ್ರಿ ರಾಜಕುಮಾರಿ ಶೇಖಾ ಲತೀಫಾ ಬಿಂತ್ ಮೊಹಮ್ಮದ್ ಅಲ್-ಮಕ್ತೌಮ್, ಅಮೆರಿಕಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಗೋವಾ ಬಳಿ ಭಾರತೀಯ ಕರಾವಳಿ ಕಾವಲು ಪಡೆಗಳ ವಶಕ್ಕೆ ಸಿಕ್ಕಿದ್ದರು. ಅದಾದ ಕೇವಲ ಎಂಟು ತಿಂಗಳಲ್ಲಿ ಅಂದರೆ ಡಿಸೆಂಬರ್ 2018ರಲ್ಲಿ ಮಿಶೆಲ್‌ ಅವರನ್ನು ಭಾರತಕ್ಕೆ ಕರೆತರಲಾಯಿತು. ಅದಕ್ಕೆ ಬದಲಿಯಾಗಿ ಭಾರತ ರಾಜಕುಮಾರಿ ಲತೀಫಾರನ್ನು ಯುಎಇಗೆ ಹಸ್ತಾಂತರಿಸಿತು ಎಂದು ಮಿಶೆಲ್ ಪರ ವಕೀಲ ಅಲ್ಜೋ ಜೋಸೆಫ್ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ಭಾರತವು ಭಾಗೀದಾರನಾಗಿರುವ ಹಲವು ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ವಿರುದ್ಧವಾಗಿ ಮಿಶೆಲ್‌ ಬಂಧನವಾಗಿದೆ ಎಂದು ಹೇಳಿದ್ದರು.

ಆದರೆ, ಇದನ್ನು ಬಲವಾಗಿ ವಿರೋಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಡಿ ಪಿ ಸಿಂಗ್‌ ಅವರು ರಾಜಕುಮಾರಿಯ ಹಸ್ತಾಂತರಕ್ಕೆ ಬದಲಾಗಿ ಮಿಶೆಲ್‌ ಅವರನ್ನು ಭಾರತಕ್ಕೆ ಕರೆತರಲಾಗಿದೆ ಎನ್ನುವುದು ಕಟ್ಟುಕತೆ ಎಂದಿದ್ದರು. ಯುಎಇ ಮತ್ತು ಭಾರತದ ನಡುವಿನ ಸಂಬಂಧವನ್ನು ಹದಗೆಡಿಸುವ ಉದ್ದೇಶದ ಪ್ರಯತ್ನ ಇದಾಗಿದೆ ಎಂದು ವಾದಿಸಿದ್ದರು.