ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (MCOCA) ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಡಿ ಪೆರೋಲ್ ಕೋರಿ ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಬಲ್ಯಾನ್ ಮಾಡಿದ ಮನವಿಯನ್ನು ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ [ನರೇಶ್ ಬಲ್ಯಾನ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಪತ್ನಿ ಪರ ಪ್ರಚಾರ ನಡೆಸಲು ಕಸ್ಟಡಿ ಪೆರೋಲ್ ನೀಡುವಂತೆ ಬಲ್ಯಾನ್ ಕೋರಿದ್ದರು.
ಬಲ್ಯಾನ್ ಅವರ ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಶಾಸಕರ ಸಾಮಾನ್ಯ ಜಾಮೀನು ಅರ್ಜಿ ನಾಳೆ ಆಲಿಸುವುದಾಗಿ ಹೇಳಿದರು.
ದೆಹಲಿಯ ವಿಚಾರಣಾ ನ್ಯಾಯಾಲಯ ಈ ತಿಂಗಳ ಆರಂಭದಲ್ಲಿ ಬಲ್ಯಾನ್ ಅವರ ಜಾಮೀನು ಅರ್ಜಿ ತಿರಸ್ಕರಿಸಿತ್ತು, ಹೀಗಾಗಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪಾತಕಿ ಕಪಿಲ್ ಸಾಂಗ್ವಾನ್ ಗ್ಯಾಂಗ್ ಜೊತೆ ಸಂಪರ್ಕ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನರೇಶ್ ಬಲ್ಯಾನ್ ಅವರನ್ನು ಡಿಸೆಂಬರ್ 4, 2024 ರಂದು ಬಂಧಿಸಲಾಗಿತ್ತು. ಸಂಗ್ವಾನ್‌ನ ಗ್ಯಾಂಗ್ ಮತ್ತು ಬಲ್ಯಾನ್ ನಡುವೆ ನಂಟಿರುವುದನ್ನು ಸೂಚಿಸಲು ಸಾಕಷ್ಟು ಪುರಾವೆಗಳಿವೆ ಎಂದು ಜನವರಿ 15 ರಂದು ತಿಳಿಸಿದ್ದ ನ್ಯಾಯಾಧೀಶೆ ಕಾವರಿ ಬವೇಜಾ ಅವರು ಜಾಮೀನು ಅರ್ಜಿ ತಿರಸ್ಕರಿಸಿದ್ದರು.
ಇದಕ್ಕೂ ಮೊದಲು, ಡಿಸೆಂಬರ್ 4 ರಂದು ಸುಲಿಗೆ ಪ್ರಕರಣದಲ್ಲಿ ಬಲ್ಯಾನ್ ಜಾಮೀನು ಪಡೆದಿದ್ದದ್ದರಾದರೂ, MCOCA ಪ್ರಕರಣದಲ್ಲಿ ಕೆಲವೇ ಗಂಟೆಗಳ ನಂತರ ಅವರನ್ನು ಬಂಧಿಸಲಾಗಿತ್ತು.
ಬಲ್ಯಾನ್ ಪರ ವಾದ ಮಂಡಿಸಿದ ವಕೀಲ ಎಂ ಎಸ್ ಖಾನ್ ದೆಹಲಿ ಗಲಭೆ ಪ್ರಕರಣದ ಆರೋಪಿ ತಾಹಿರ್ ಹುಸೇನ್ ಅವರಿಗೆ ಕಸ್ಟಡಿ ಪೆರೋಲ್ ನೀಡಿರುವಂತೆಯೇ ಬಲ್ಯಾನ್ ಅವರಿಗೂ ನೀಡಬೇಕು ಎಂದು ಕೋರಿದರು. ಆದರೆ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ದೆಹಲಿ ಪೊಲೀಸರು, ತನಿಖೆ ಇನ್ನೂ ಮುಂದುವರೆದಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಪ್ರಕರಣ ತಾಹಿರ್ ಹುಸೇನ್ ಪ್ರಕರಣಕ್ಕಿಂತ ಭಿನ್ನವಾಗಿದೆ ಎಂದ ನ್ಯಾಯಾಲಯ ಕಸ್ಟಡಿ ಪೆರೋಲ್‌ಗಾಗಿ ಬಲ್ಯಾನ್ ಮಾಡಿದ್ದ ಮನವಿಯನ್ನು ತಿರಸ್ಕರಿಸಿತು.