ಮಹಿಳಾ ಮೀಸಲಾತಿ ಮಸೂದೆ ಮತ್ತು ದೆಹಲಿ ಹೈಕೋರ್ಟ್
ಮಹಿಳಾ ಮೀಸಲಾತಿ ಮಸೂದೆ ಮತ್ತು ದೆಹಲಿ ಹೈಕೋರ್ಟ್ 
ಸುದ್ದಿಗಳು

ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಹಿಳಾ ಮೀಸಲಾತಿ ಜಾರಿ ಕೋರಿ ಪಿಐಎಲ್‌: ವಿಚಾರಣೆಗೆ ದೆಹಲಿ ಹೈಕೋರ್ಟ್ ನಕಾರ

Bar & Bench

ಬರಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮಹಿಳಾ ಮೀಸಲಾತಿ ಕಾಯಿದೆ- 2023 ಅನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪುರಸ್ಕರಿಸಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ಈ ಕಾಯಿದೆಯು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಒದಗಿಸುವುದನ್ನು ಕಡ್ಡಾಯಗೊಳಿಸುತ್ತದೆ.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ನಂತರ ಕಾಯಿದೆ ಜಾರಿಗೆ ಬರಲಿದೆ ಎಂದು ಸಂಸತ್ತು ಈಗಾಗಲೇ ಹೇಳಿದ್ದು ನ್ಯಾಯಾಲಯಗಳು ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಲೋಕಸಭಾ ಚುನಾವಣೆಗೂ ಮುನ್ನ ಕಾಯಿದೆಯನ್ನು ಜಾರಿಗೆ ತರುವಂತೆ ಕೋರಿ ವಕೀಲೆ ಯೋಗಮಾಯಾ ಎಂ.ಜಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಕಾಯಿದೆ ಪರಿಶೀಲಿಸಿದ ಪೀಠ, ʼಅರ್ಜಿದಾರೆ ಕಾಯಿದೆ ಶೀಘ್ರ ಜಾರಿಯಾಗಬೇಕೆಂದು ಬಯಸುವುದಾದರೆ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಂತರ ಮೀಸಲಾತಿ ಜಾರಿಗೆ ತರಬೇಕೆನ್ನುವ ಕಾಯಿದೆಯ ನಿಬಂಧನೆಗಳನ್ನು ಪ್ರಶ್ನಿಸಬೇಕಾಗುತ್ತದೆ ಎಂದಿತು.

"ನಾವು ಸೆಕ್ಷನ್ 334 ಎ (ಕ್ಷೇತ್ರ ಮರುವಿಂಗಡಣೆ ನಂತರ ಕಾಯಿದೆ ಜಾರಿ ಕಡ್ಡಾಯಗೊಳಿಸುವ ನಿಬಂಧನೆ) ಆಚೆಗೆ ಹೋಗಲು ಸಾಧ್ಯವಿಲ್ಲ. ಅದನ್ನು ರದ್ದುಗೊಳಿಸಲು ನೀವು ಮನವಿ ಸಲ್ಲಿಸಬೇಕಾಗುತ್ತದೆ. ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಇದು ಯಾವಾಗ ಜಾರಿಗೆ ಬರುತ್ತದೆ ಎಂದು ಸಂಸತ್ತು ನಿರ್ದಿಷ್ಟಪಡಿಸಿದೆ... ಇದಕ್ಕೆ ವಿರುದ್ಧವಾಗಿ ಯಾವುದೇ ನ್ಯಾಯಾಲಯ ವರ್ತಿಸಲು ಹೇಗೆ ಸಾಧ್ಯ?" ಎಂದು ನ್ಯಾಯಾಲಯ ಪ್ರಶ್ನಿಸಿತು.

ಕಾಯಿದೆಯ ನಿಬಂಧನೆಗಳನ್ನು ಪ್ರಶ್ನಿಸಿ ಬೇರೊಂದು ಅರ್ಜಿಯನ್ನು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಆದ್ದರಿಂದ, ಅರ್ಜಿದಾರೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿತು.

ಅರ್ಜಿದಾರೆ ಅಂತಿಮವಾಗಿ ಮನವಿ ಹಿಂಪಡೆದಾಗ ನ್ಯಾಯಾಲಯ ಆಕೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸ್ವಾತಂತ್ರ್ಯ ನೀಡಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಡೆಸಿದ ನಂತರ ಇದು ಜಾರಿಗೆ ಬರಲಿದೆ ಎಂದು ಹೇಳುವ ನಿಬಂಧನೆಯನ್ನು ಕಾಯಿದೆಯೇ ಒಳಗೊಂಡಿದೆ ಎಂದು ಗಮನಸೆಳೆದರು.

ವಿಶೇಷವೆಂದರೆ, ಅರ್ಜಿದಾರೆ ಈ ಹಿಂದೆ ದೆಹಲಿ ಹೈಕೋರ್ಟ್‌ ಏಕ ಸದಸ್ಯ ಪೀಠಕ್ಕೆ ಮನವಿ ಸಲ್ಲಿಸಿದ್ದರೂ ಕೋರಲಾದ ಪರಿಹಾರಗಳು ಪಿಐಎಲ್ ಸ್ವರೂಪದಲ್ಲಿದ್ದು ಅರ್ಜಿದಾರರು ಪಿಐಎಲ್ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ಸುತ್ತಲಿನ ದೀರ್ಘಕಾಲದ ಅನಿಶ್ಚಿತತೆ ಪರಿಗಣಿಸಿ, ಮಹಿಳಾ ಮೀಸಲಾತಿ ಮಸೂದೆ- 2023ರ ಅನುಷ್ಠಾನಕ್ಕೆ ನಿರ್ದಿಷ್ಟವಾಗಿ ಮತ್ತು ತ್ವರಿತ ವಾಗಿ ದಿನವೊಂದನ್ನು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರೆ ಕೋರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಕಾಂಗ್ರೆಸ್‌ ಮತ್ತಿತರ ಪ್ರಮುಖ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಮಸೂದೆಯ ನಿಬಂಧನೆಗಳನ್ನು ಹೇಗೆ ಜಾರಿಗೆ ತರಲು ಯೋಜಿಸಿದ್ದಾರೆ ಎಂಬುದರ ಬಗ್ಗೆ ಈ ಎಲ್ಲಾ ಪಕ್ಷಗಳಿಂದ ಪ್ರತಿಕ್ರಿಯೆಯನ್ನು ಕೋರಲು ಚುನಾವಣಾ ಆಯೋಗಕ್ಕೆ ಸೂಚಿಸುವಂತೆಯೂ ಆಕೆ ನ್ಯಾಯಾಲಯಕ್ಕೆ ವಿನಂತಿಸಿದ್ದರು.

ಮಸೂದೆಯನ್ನು ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದರೂ, ಅದನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎಂಬುದರ ಬಗ್ಗೆ ಖಚಿತತೆ ಇಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು.

ಸಂವಿಧಾನ (128 ನೇ ತಿದ್ದುಪಡಿ) ಕಾಯಿದೆ, 2023 ಜಾರಿಗೆ ಬಂದ ನಂತರ ನಡೆಯುವ ಮೊದಲ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಾಯಿದೆ ಅವಲಂಬಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ 2029ರ ಮೊದಲು ಕಾಯಿದೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅರ್ಜಿದಾರರು ದೂರಿದ್ದರು.