ದೆಹಲಿ ಹೈಕೋರ್ಟ್, ಏಕರೂಪ ನಾಗರಿಕ ಸಂಹಿತೆ
ದೆಹಲಿ ಹೈಕೋರ್ಟ್, ಏಕರೂಪ ನಾಗರಿಕ ಸಂಹಿತೆ 
ಸುದ್ದಿಗಳು

ಏಕರೂಪ ನಾಗರಿಕ ಸಂಹಿತೆ ಜಾರಿ: ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

Bar & Bench

ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಈ ನಿಟ್ಟಿನಲ್ಲಿ ಕಾನೂನು ರೂಪಿಸುವಂತೆ ಶಾಸಕಾಂಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

"ನಾವು ಕಾನೂನನ್ನು ಜಾರಿಗೆ ತರಲು ಶಾಸಕಾಂಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಈಗಾಗಲೇ ಪ್ರಕರಣದ ವಿಚಾರಣೆ ನಡೆಸಿ ಅರ್ಜಿಗಳನ್ನು ತಿರಸ್ಕರಿಸಿದೆ" ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ಪ್ರಕರಣ ಈಗಾಗಲೇ ಕಾನೂನು ಆಯೋಗದ ಅಂಗಳದಲ್ಲಿದ್ದು ತಮ್ಮ ಸಲಹೆಗಳೊಂದಿಗೆ ಕಾನೂನು ಆಯೋಗ ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಇದೆ ಎಂದು ನ್ಯಾಯಾಲಯ ಹೇಳಿತು. ಆ ಬಳಿಕ ಅರ್ಜಿದಾರರಾದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಮತ್ತು ನಿಘಾತ್ ಅಬ್ಬಾಸ್, ಅಂಬರ್ ಜೈದ್ ಮತ್ತಿತರು ತಮ್ಮ ಅರ್ಜಿಗಳನ್ನು ಹಿಂಪಡೆದರು .

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಭಾರತದ ಕಾನೂನು ಆಯೋಗ ಕಳೆದ ಜೂನ್‌ನಲ್ಲಿ ಸಾರ್ವಜನಿಕರು, ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳು ಮತ್ತಿತರ ಭಾಗೀದಾರರಿಂದ ಅಭಿಪ್ರಾಯ ಮತ್ತು ಸಲಹೆ ಕೋರಿತ್ತು.

2019ರಲ್ಲಿ ಅರ್ಜಿ ಸಲ್ಲಿಸಿದ್ದ ಉಪಾಧ್ಯಾಯ ಅವರು ಮೂರು ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆಯನ್ನು ರಚಿಸಲು ನ್ಯಾಯಾಂಗ ಆಯೋಗ ಅಥವಾ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು .

ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸಿದ್ದ ಕೇಂದ್ರ ಸರ್ಕಾರ ಅಶ್ವಿನಿ ಕುಮಾರ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಂತೆ ಕೋರಿತ್ತು.

ವಿವಿಧ ಸಮುದಾಯಗಳನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳ ಆಳವಾದ ಅಧ್ಯಯನದ ನಂತರವೇ ಯುಸಿಸಿ ಜಾರಿಗೆ ತರಬಹುದಾಗಿದ್ದು ನ್ಯಾಯಾಲಯದ ಆದೇಶಗಳ ಆಧಾರದ ಮೇಲೆ ಮೂರು ತಿಂಗಳಲ್ಲಿ ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯ ಹೇಳಿತ್ತು.

ಸಾಂವಿಧಾನಿಕ ಯೋಜನೆಯಡಿ, ಸಂಸತ್ತು ಮಾತ್ರ ಅಂತಹ ಕಾರ್ಯ ಕೈಗೊಳ್ಳಬಹುದಾಗಿದ್ದು ನಿರ್ದಿಷ್ಟ ಕಾಯಿದೆ ಜಾರಿಗೆ ತರಲು ನ್ಯಾಯಾಲಯ ಶಾಸಕಾಂಗಕ್ಕೆ ರಿಟ್‌ ಅಧಿಕಾರದ ಮೂಲಕ ಸೂಚಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಲಾಗಿತ್ತು.

ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ ಆದೇಶ ಸ್ಪಷ್ಟವಾಗಿದ್ದು ತಾನು ಆ ಆದೇಶ ಮೀರುವಂತಿಲ್ಲ ಎಂದು ಶುಕ್ರವಾರ ಹೇಳಿದ ಹೈಕೋರ್ಟ್‌ ಮನವಿ ವಿಚಾರಣೆಗೆ ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಮನವಿ ಹಿಂಪಡೆದರು.