Sushant Singh Rajput and Delhi HC
Sushant Singh Rajput and Delhi HC 
ಸುದ್ದಿಗಳು

ನಟ ಸುಶಾಂತ್ ಸಿಂಗ್ ರಜಪೂತ್ ಕುರಿತ ಸಿನಿಮಾ ಪ್ರಸಾರ ತಡೆಗೆ ದೆಹಲಿ ಹೈಕೋರ್ಟ್ ನಕಾರ

Bar & Bench

ಬಾಲಿವುಡ್ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್  ಅವರ ಜೀವನ ಆಧಾರಿತ 'ನ್ಯಾಯ್: ದಿ ಜಸ್ಟೀಸ್' ಚಿತ್ರ ಪ್ರಸಾರದ ವಿರುದ್ಧ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. [ಕೃಷ್ಣ ಕಿಶೋರ್ ಸಿಂಗ್ ಮತ್ತು ಸರಳಾ ಎ ಸರೋಗಿ ಇನ್ನಿತರರ ನಡುವಣ ಪ್ರಕರಣ].

ಅವರು ಸಾವನ್ನಪ್ಪುವುದರೊಂದಿಗೆ ಅವರ ವ್ಯಕ್ತಿತ್ವದ ಹಕ್ಕು, ಖಾಸಗಿತನದ ಹಾಗೂ ಪ್ರಚಾರದ ಹಕ್ಕುಗಳು ನಶಿಸಿಹೋಗಿವೆ. ಅವರ ತಂದೆ ಈ ಹಕ್ಕುಗಳನ್ನು ಪ್ರತಿಪಾದಿಸಲು ಅವು ಅನುವಂಶಿಕವಲ್ಲ ಎಂದು ನ್ಯಾ. ಸಿ ಹರಿ ಶಂಕರ್‌ ಹೇಳಿದ್ದಾರೆ.

ಆದ್ದರಿಂದ, ಲಪಲಾಪ್ ಒರಿಜಿನಲ್ ಎಂಬ ಓವರ್-ದಿ-ಟಾಪ್ (ಒಟಿಟಿ) ವೇದಿಕೆಯಲ್ಲಿ ಚಲನಚಿತ್ರದ ನಿರಂತರ ಪ್ರಸಾರಕ್ಕೆ ತಡೆ ಕೋರಿ ರಜಪೂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಸಿನಿಮಾ ಜೂನ್ 2021ರಲ್ಲಿ ಬಿಡುಗಡೆಯಾಗಿತ್ತು.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ಸಿನಿಮಾದಲ್ಲಿ ಪ್ರದರ್ಶಿಸಲಾಗಿರುವ ಮಾಹಿತಿ ಸಂಪೂರ್ಣವಾಗಿ ಮಾಧ್ಯಮದಲ್ಲಿ ದೊರೆತ ವಸ್ತುವಿಷಯಗಳಿಂದ ಪಡೆಯಲಾಗಿದೆ. ಹೀಗಾಗಿ ಇದು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನೇ ನಿರೂಪಿಸಿದೆ.

  • ಚಲನಚಿತ್ರ ಈಗಾಗಲೇ ಬಿಡುಗಡೆಯಾಗಿರುವಾಗ, ಸಾವಿರಾರು ಜನರು ಇದನ್ನು ವೀಕ್ಷಿಸಿರುವಾಗ ಅದರ ಪ್ರಸಾರ ನಿಲ್ಲಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ.

  • ಸಂವಿಧಾನದ 19(2) ನೇ ವಿಧಿಯನ್ನು ಚಿತ್ರ ಉಲ್ಲಂಘಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಿನಿಮಾದ  ಪ್ರಸಾರ ತಡೆದರೆ ಸಂವಿಧಾನದ 19 (1) (ಎ) ಅಡಿಯಲ್ಲಿ ಪ್ರತಿವಾದಿಗಳ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ.

  • ಖ್ಯಾತನಾಮರಿಗೆ ಮಾತ್ರ ಇರಬೇಕು ಎನ್ನುವ ಸೆಲಬ್ರಿಟಿ ಹಕ್ಕು ಪರಿಕಲ್ಪನೆ ಕಾನೂನುಬದ್ಧವಾಗಿ ಒಪ್ಪುವಂಥದ್ದಲ್ಲ. ಎಲ್ಲ ವ್ಯಕ್ತಿಗಳಿಗೂ ಸಮಾನತೆಯನ್ನು ಪ್ರತಿಪಾದಿಸುವ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಇದಕ್ಕೆ ಆಸ್ಪದವಿಲ್ಲ.

  • ಖ್ಯಾತನಾಮರು ರಾತ್ರೋರಾತ್ರಿ ಪ್ರಸಿದ್ಧಿಗೆ ಬಂದು ಅಷ್ಟೇ ಬೇಗನೆ ಸಾರ್ವಜನಿಕರ ಕಣ್ಣಿನಿಂದ ಮರೆಯಾಗುತ್ತಾರೆ.

  • ತಾತ್ಕಾಲಿಕವಾಗಿ ಸೆಲೆಬ್ರಿಟಿಗಳಿಗೆ ವಿಶೇಷ ಸ್ಥಾನಮಾನದಂತಹ ಕಾನೂನುಬದ್ಧ ಹಕ್ಕನ್ನು ಒದಗಿಸುವುದು ವಿರೋಧಾಭಾಸದ ಕಾರ್ಯವಾಗುತ್ತದೆ.