ಸುದ್ದಿಗಳು

[ಅಮ್ನೆಸ್ಟಿ ಪ್ರಕರಣ] ಖಾತೆ ಮುಟ್ಟುಗೋಲು ಆದೇಶ ಕುರಿತ ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

Bar & Bench

ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ವಿರುದ್ಧ 2020ರ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಜಾರಿಗೊಳಿಸಿದ ಖಾತೆ ತಾತ್ಕಾಲಿಕ ಮುಟ್ಟುಗೋಲು ಆದೇಶಕ್ಕೆ (ಪಿಎಒ) ಸಂಬಂಧಿಸಿದ ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಆದರೆ ನ್ಯಾಯಾಲಯದ ಅನುಮತಿಯಿಲ್ಲದೆ ಇ ಡಿ ಯಾವುದೇ ಅಂತಿಮ ಆದೇಶ ಜಾರಿಗೊಳಿಸುವಂತಿಲ್ಲ ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ಅವರಿದ್ದ ಏಕ ಸದಸ್ಯ ಪೀಠ ಸ್ಪಷ್ಟಪಡಿಸಿದೆ.

ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ- 2010 (ಎಫ್‌ಸಿಆರ್‌ಎ) ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ- 2002ರ (ಪಿಎಂಎಲ್‌ಎ) ನಿಬಂಧನೆಗಳನ್ನು ಅಮ್ನೆಸ್ಟಿ ಉಲ್ಲಂಘಿಸಿದೆ ಎಂದು ಜಾರಿ ನಿರ್ದೇಶನಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು. ಹಣ ವರ್ಗಾವಣೆಯ ಆರೋಪದ ಮೇಲೆ ಎರಡೂ ಕಾಯಿದೆಗಳ ಅಡಿ ಅಮ್ನೆಸ್ಟಿಯ ಬ್ಯಾಂಕ್ ಖಾತೆಗಳನ್ನು ಈ ಆದೇಶದ ಮೂಲಕ ಮುಟ್ಟುಗೋಲು ಹಾಕಿಕೊಂಡಿತ್ತು.

ಅಮ್ನೆಸ್ಟಿ ಪರ ವಕೀಲರಾದ ವಕೀಲ ಅರ್ಷ್‌ದೀಪ್ ಸಿಂಗ್ ಖುರಾನಾ, 180 ದಿನಗಳ ಅವಧಿ ಮುಗಿದ ಕಾರಣ ಪ್ರಸ್ತುತ ಪ್ರಕರಣದಲ್ಲಿ ಪಿಎಒ ಇನ್ನು ಮುಂದೆ ಮಾನ್ಯವಾಗದು ಎಂದು ಮೇ 25 ರಂದು ವಾದಿಸಿದ್ದರು. ಕಾಯಿದೆ ಪ್ರಕಾರ ನ್ಯಾಯ ನಿರ್ಣಯ ಸಂಸ್ಥೆಯು ಜಾರಿ ನಿರ್ದೇಶನಾಲಯದ ಆದೇಶವನ್ನು 180 ದಿನಗಳ ಒಳಗೆ ದೃಢೀಕರಿಸಬೇಕಿದೆ. ವಿಕಾಸ್‌ ಡಬ್ಲ್ಯೂಎಸ್‌ಪಿ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ಆಧರಿಸಿ ವಾದ ಮಂಡನೆಯಾಗಿತ್ತು.

ಕೆಲ ಸಮಸ್ಯೆಗಳಿಂದಾಗಿ ವಿಳಂಬವಾಗಿದೆ ಎಂದು ಇ ಡಿ ಪರ ಹಾಜರಾದ ವಕೀಲ ಅಮಿತ್ ಮಹಾಜನ್ ವಿವರಿಸಿದರು. ಹೈಕೋರ್ಟ್‌ನ ವಿಭಾಗೀಯ ಪೀಠವು 2021 ರ ಜನವರಿ 8 ರಂದು ವಿಕಾಸ್ ಡಬ್ಲ್ಯುಎಸ್‌ಪಿ ಪ್ರಕರಣದ ತೀರ್ಪನ್ನು ತಡೆಹಿಡಿಯಲು ಇದು ಕೂಡ ಕಾರಣವಾಗಿತು. ಹಿಂದೆ ಇದೇ ವಿಷಯ 30-40 ಪ್ರಕರಣಗಳಲ್ಲಿ ಉದ್ಭವಿಸಿತ್ತು ಎಂದು ಅಮ್ನೆಸ್ಟಿ ಪರ ವಕೀಲ ಖುರಾನಾ ವಾದಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ 5 (1) ಮತ್ತು (3) ಸೆಕ್ಷನ್‌ಗಳ ಅಡಿಯಲ್ಲಿ ನಿಗದಿಪಡಿಸಿದ 180 ದಿನಗಳ ಕಾಲಾವಕಾಶ ಮಾನ್ಯವೇ ಅಥವಾ ಅಲ್ಲವೇ ಎಂಬ ವಿಷಯ ವಿಭಾಗೀಯ ಪೀಠದ ಮುಂದೆ ಇದ್ದು ತೀರ್ಪು ಇನ್ನಷ್ಟೇ ಬರಬೇಕಿದೆ ಎಂಬುದನ್ನು ಕೂಡ ಗಮನಿಸಬೇಕು ಎಂದಿತು.

ಅರ್ಜಿಯನ್ನು ಪೂರ್ಣಗೊಳಿಸಲು ಪಕ್ಷಗಳಿಗೆ ಸಮಯಾವಕಾಶ ನೀಡಿದ ನ್ಯಾಯಾಲಯ ಸೆಪ್ಟೆಂಬರ್ 28ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿತು.

ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮ್ನೆಸ್ಟಿ ವಿರುದ್ಧ ಸಿಬಿಐ ನವೆಂಬರ್ 2019 ರಲ್ಲಿ ಎಫ್‌ಐಆರ್‌ ದಾಖಲಿಸಿತ್ತು. ಪರಿಣಾಮ 1,87,86,807 ಮೊತ್ತದ ಆಸ್ತಿ ಹಾಗೂ 2,35,977 ರೂಗಳನ್ನು ಹೊಂದಿರುವ ಎರಡು ಬ್ಯಾಂಕ್ ಖಾತೆಗಳು ಹಾಗೂ 1,85,50,830 ರೂಗಳನ್ನು ಹೊಂದಿರುವ 10 ಸ್ಥಿರ ಠೇವಣಿ ಖಾತೆಗಳನ್ನು ಜಾರಿ ನಿರ್ದೇಶನಾಲಯ ಪಿಎಒ ಆದೇಶದ ಮೂಲಕ ನವೆಂಬರ್ 26, 2020ರಂದು ಮುಟ್ಟುಗೋಲು ಹಾಕಿಕೊಂಡಿತ್ತು.

ಇದನ್ನು ಪ್ರಶ್ನಿಸಿ ಅಮ್ನೆಸ್ಟಿ ಹೈಕೋರ್ಟ್‌ ಮೊರೆ ಹೋಗಿತ್ತು. ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಒದಗಿಸಲಾದ 180 ದಿನಗಳ ಕಾಲಾವಕಾಶ ಮುಕ್ತಾಯಗೊಂಡಿರುವುದು ಮತ್ತು ತೀರ್ಪು ನೀಡುವ ಅಧಿಕಾರ ನಿಷ್ಕ್ರಿಯಗೊಂಡಿದೆ ಎಂಬ ಆಧಾರದಲ್ಲಿ ಅದು ನ್ಯಾಯಾಲಯದ ಮೊರೆ ಹೋಗಿತ್ತು.