Delhi High Court and CLAT 2025 
ಸುದ್ದಿಗಳು

ಪರಿಷ್ಕೃತ ಸಿಎಲ್ಎಟಿ ಫಲಿತಾಂಶ ತಡೆಗೆ ದೆಹಲಿ ಹೈಕೋರ್ಟ್ ನಕಾರ; ಪಿಜಿ ಪರೀಕ್ಷೆ ಸಂಬಂಧ ಬಾಂಬೆ ಹೈಕೋರ್ಟ್‌ ನೋಟಿಸ್‌

ಮಧ್ಯಪ್ರದೇಶ ಹೈಕೋರ್ಟ್ ಬಳಿಕ ಬಾಂಬೆ ಹೈಕೋರ್ಟ್ ಕೂಡ ಪ್ರಸಕ್ತ ಸಾಲಿನ ಸಿಎಲ್ಎಟಿ ಸ್ನಾತಕೋತ್ತರ ಪರೀಕ್ಷೆ ಉತ್ತರಗಳಿಗೆ ಸಂಬಂಧಿಸಿದಂತೆ ಎನ್‌ಎಲ್‌ಯುಗೆ ನೋಟಿಸ್‌ ನೀಡಿದೆ.

Bar & Bench

ಎರಡು ಪ್ರಶ್ನೆಗಳಲ್ಲಿ ದೋಷ  ಕಂಡುಬಂದ ಹಿನ್ನೆಲೆಯಲ್ಲಿಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ 2025 (ಸಿಎಲ್‌ಎಟಿ-UG) ಫಲಿತಾಂಶಗಳನ್ನು ಪರಿಷ್ಕರಿಸಲು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ (NLU ಕನ್ಸೋರ್ಟಿಯಂ) ನಿರ್ದೇಶಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ .

ಏಕಸದಸ್ಯ ಪೀಠದ ತೀರ್ಪಿನಲ್ಲಿ ಮೇಲ್ನೋಟಕ್ಕೆ  ಯಾವುದೇ ದೋಷ ಕಂಡುಬಂದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ತಿಳಿಸಿದೆ.  

ಪದವಿ ಪ್ರವೇಶ ಪರೀಕ್ಷಾ ಪತ್ರಿಕೆಯಲ್ಲಿ ಎರಡು ದೋಷಗಳಿರುವ ಬಗ್ಗೆ 17 ವರ್ಷದ ಸಿಎಲ್ಎಟಿ ಅಭ್ಯರ್ಥಿ ಸಲ್ಲಿಸಿದ್ದ ಮನವಿಗೆ ಡಿಸೆಂಬರ್ 20 ರಂದು, ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಭಾಗಶಃ ಅನುಮತಿಸಿತ್ತು.

ಎರಡು ಸ್ಪಷ್ಟ ದೋಷಗಳನ್ನು ಸಿಎಲ್‌ಎಟಿ  ತಜ್ಞರ ಸಮಿತಿಗಳು ಏಕೆ ಸರಿಪಡಿಸಲಿಲ್ಲ ಎಂದು ನ್ಯಾ. ಬಖ್ರು ಅವರು ಪ್ರಶ್ನಿಸಿದರು.

ಏಕ-ನ್ಯಾಯಾಧೀಶರ ಆದೇಶಕ್ಕೆ ಅನುಗುಣವಾಗಿ ಎನ್‌ಎಲ್‌ಯು ಒಕ್ಕೂಟ ಫಲಿತಾಂಶಗಳನ್ನು ಘೋಷಿಸುವುದನ್ನು ಮುಂದುವರಿಸಬಹುದು ಎಂದು ಪೀಠವು ಸ್ಪಷ್ಟಪಡಿಸಿದ್ದು ಪ್ರಕರಣವನ್ನು ಜನವರಿ 7, 2025ಕ್ಕೆ ಮುಂದೂಡಿತು.

CLAT 2025

ಸಿಎಲ್‌ಎಟಿ ಸ್ನಾತಕೋತ್ತರ ಪರೀಕ್ಷೆ ಪ್ರಶ್ನಿಸಿ ಅರ್ಜಿ

ಮಧ್ಯಪ್ರದೇಶ ಹೈಕೋರ್ಟ್‌ ಬಳಿಕ ಬಾಂಬೆ ಹೈಕೋರ್ಟ್‌ ಕೂಡ ಪ್ರಸಕ್ತ ಸಾಲಿನ ಸಿಎಲ್‌ಎಟಿ ಸ್ನಾತಕೋತ್ತರ ಪರೀಕ್ಷೆ ಉತ್ತರಗಳಿಗೆ ಸಂಬಂಧಿಸಿದಂತೆ ತಕರಾರು ಎತ್ತಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಕಾನೂನು ವಿವಿಗಳ ಒಕ್ಕೂಟದ (ಎನ್‌ಎಲ್‌ಯು) ಪ್ರತಿಕ್ರಿಯೆ ಕೇಳಿ ನೋಟಿಸ್‌ ನೀಡಿದೆ.

ಅಂತಿಮ ಉತ್ತರ ಹಾಗೂ ಶುಲ್ಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್‌ ಒಕ್ಕೂಟಕ್ಕೆ ಸೋಮವಾರ ನೋಟಿಸ್‌ ನೀಡಿತ್ತು.