ಕಾಂಗ್ರೆಸ್, ಆದಾಯ ತೆರಿಗೆ ಇಲಾಖೆ ಮತ್ತು ದೆಹಲಿ ಹೈಕೋರ್ಟ್ 
ಸುದ್ದಿಗಳು

ತೆರಿಗೆ ಮರುಮೌಲ್ಯಮಾಪನ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಐಟಿ ಇಲಾಖೆಯು 2014-15, 2015-16 ಮತ್ತು 2016-17ನೇ ಸಾಲಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಆರಂಭಿಸಿರುವ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಅರ್ಜಿಗಳನ್ನು ಸಲ್ಲಿಸಿತ್ತು.

Bar & Bench

ಆದಾಯ ತೆರಿಗೆ (ಐಟಿ) ಇಲಾಖೆ ತನ್ನ ವಿರುದ್ಧ ಪ್ರಾರಂಭಿಸಿದ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಸಲ್ಲಿಸಿದ್ದ ಮೂರು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್ ಅವರ ವಿಭಾಗೀಯ ಪೀಠವು ಮಾರ್ಚ್ 20 ರಂದು ತೀರ್ಪನ್ನು ಕಾಯ್ದಿರಿಸಿತ್ತು.

ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವಲ್ಲಿನ ವಿಳಂಬಕ್ಕೆ ಸಂಬಂಧಿಸಿದ ಆಕ್ಷೇಪಣೆಯೊಂದನ್ನು ಹೊರತುಪಡಿಸಿ ಕಾಂಗ್ರೆಸ್ ಎತ್ತಿರುವ ಎಲ್ಲ ಆಕ್ಷೇಪಣೆಗಳನ್ನು ತಾನು ನಿಭಾಯಿಸಿದ್ದೇನೆ ಎಂದು ನ್ಯಾಯಾಲಯವು ಇಂದು ತೀರ್ಪು ನೀಡಿದ ಸಂದರ್ಭದಲ್ಲಿ ಹೇಳಿತು.

"ನೀವು ಮಾರ್ಚ್ 20 ರಂದು ನಮ್ಮ ಮುಂದೆ ಬಂದಿದ್ದರಿಂದ ನಾವು ಅದಕ್ಕೆ ಉತ್ತರಿಸದಿರಲು ನಿರ್ಧರಿಸಿದ್ದೇವೆ. ಮೌಲ್ಯಮಾಪನವನ್ನು 31 ರೊಳಗೆ ಪೂರ್ಣಗೊಳಿಸಬೇಕು; ಅದನ್ನು ನೀವು ಆಗ್ರಹಿಸಲು ನಾವು ಮುಕ್ತವಾಗಿರಿಸಿದ್ದೇವೆ" ಎಂದು ನ್ಯಾಯಮೂರ್ತಿ ವರ್ಮಾ ಕಾಂಗ್ರೆಸ್ ಪ್ರತಿನಿಧಿಸುವ ವಕೀಲರಿಗೆ ತಿಳಿಸಿದರು.

2014-15, 2015-16 ಮತ್ತು 2016-17ನೇ ಸಾಲಿನ ಆದಾಯ ಸಲ್ಲಿಕೆ ವಿವರಗಳಿಗೆ ಸಂಬಂಧಿಸಿದಂತೆ ಐಟಿ ಇಲಾಖೆಯು ತನ್ನ ವಿರುದ್ಧ ಆರಂಭಿಸಿರುವ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಅರ್ಜಿಗಳನ್ನು ಸಲ್ಲಿಸಿತ್ತು.

ಕಾಂಗ್ರೆಸ್ ಪಕ್ಷದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ , ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಕೆಲ ಮಿತಿಗಳಿಂದ ನಿರ್ಬಂಧಿಸಲಾಗಿದ್ದು, ಇದನ್ನು ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿ ಮಾಡಲಾಗುತ್ತಿದೆ ಎಂದು ವಾದಿಸಿದ್ದರು.

ಐಟಿ ಇಲಾಖೆಯ ಪರವಾಗಿ ವಕೀಲ ಜೊಹೆಬ್ ಹುಸೇನ್ , ಪ್ರಕರಣದಲ್ಲಿ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿಲ್ಲ. ಕಾಂಗ್ರೆಸ್‌ನಿಂದ ಸಲ್ಲಿಕೆಯಾಗದ ಆದಾಯದ ವಿವರವು 520 ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ವಾದ ಮಂಡಿಸಿದ್ದರು.

ಬಾಕಿ ಇರುವ ಸುಮಾರು 105 ಕೋಟಿ ರೂಪಾಯಿ ತೆರಿಗೆಯನ್ನು ವಸೂಲಿ ಮಾಡಲು ಐಟಿ ಇಲಾಖೆ ಹೊರಡಿಸಿದ ಡಿಮ್ಯಾಂಡ್ ನೋಟಿಸ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ಆದೇಶದ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಮಾರ್ಚ್ 13 ರಂದು ತಿರಸ್ಕರಿಸಿತ್ತು .

ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್ ಅವರ ನ್ಯಾಯಪೀಠವು ಐಟಿಎಟಿ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿತ್ತು.

ಆದಾಗ್ಯೂ, ಪಕ್ಷದಿಂದ 65.94 ಕೋಟಿ ರೂ.ಗಳನ್ನು ವಸೂಲಿ ಮಾಡುವುದು ಸೇರಿದಂತೆ ಈ ಮಧ್ಯೆ ಸಂಭವಿಸಿದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಐಟಿಎಟಿ ಮುಂದೆ ತಡೆಯಾಜ್ಞೆಗಾಗಿ ಹೊಸ ಅರ್ಜಿ ಸಲ್ಲಿಸಲು ನ್ಯಾಯಾಲಯವು ಕಾಂಗ್ರೆಸ್‌ಗೆ ಅವಕಾಶ ನೀಡಿತ್ತು.

ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ವಿವೇಕ್ ತಂಖಾ, ಎ.ಎಸ್.ಚಾಂದಿಯೋಕ್ ಮತ್ತು ಪಿ.ಸಿ.ಸೇನ್, ವಕೀಲರಾದ ಪ್ರಸನ್ನ, ಅಮಿತ್ ಭಂಡಾರಿ, ಸಿದ್ಧಾರ್ಥ್, ವಿಪುಲ್ ತಿವಾರಿ, ಇಂದರ್ ಸಿಂಗ್, ಸಿಮ್ರಾನ್ ಕೊಹ್ಲಿ, ವಿಧುಷಿ ಕೇಶರಿ, ಕನಿಷ್ಕಾ ಸಿಂಗ್, ನಿಖಿಲ್ ಭಲ್ಲಾ ಮತ್ತು ಸ್ವಾತಿ ಆರ್ಯ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸಿದ್ದರು

ಹಿರಿಯ ಸ್ಥಾಯಿ ವಕೀಲರಾದ ಜೊಹೆಬ್ ಹುಸೇನ್ ಮತ್ತು ವಿಪುಲ್ ಅಗರ್ವಾಲ್, ವಕೀಲರಾದ ಸಂಜೀವ್ ಮೆನನ್, ಸಾಕ್ಷಿ ಶೈರ್ವಾಲ್ ಮತ್ತು ವಿವೇಕ್ ಗುರ್ನಾನಿ ಐಟಿ ಇಲಾಖೆಯನ್ನು ಪ್ರತಿನಿಧಿಸಿದರು

[ತೀರ್ಪು ಓದಿ]

Indian National Congress Vs. Deputy Commissioner Of Income Tax Central - 19 & Anr.pdf
Preview