ಕಾಂಗ್ರೆಸ್ ಮತ್ತು ದೆಹಲಿ ಹೈಕೋರ್ಟ್ 
ಸುದ್ದಿಗಳು

ಆದಾಯ ತೆರಿಗೆ ನೋಟಿಸ್‌ ಪ್ರಕರಣ: ಕಾಂಗ್ರೆಸ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಆದಾಯ ತೆರಿಗೆ ಇಲಾಖೆ ನೋಟಿಸ್‌ಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್‌ ಸಲ್ಲಿಸಿದ್ದ ಮನವಿಯನ್ನು ಈ ಹಿಂದೆ ಐಟಿಎಟಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು.

Prashant Jha

ಆದಾಯ ತೆರಿಗೆ (ಐಟಿ) ಇಲಾಖೆ ₹105 ಕೋಟಿಗಿಂತಲೂ ಹೆಚ್ಚಿನ ಬಾಕಿ ತೆರಿಗೆ ಪಾವತಿಸುವಂತೆ ತನಗೆ ನೀಡಿದ್ದ ನೋಟಿಸ್‌ಗೆ ತಡೆ ನೀಡಲು ನಿರಾಕರಿಸಿದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಆದೇಶ ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ಐಟಿಎಟಿ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಬಡ್ಡಿ ಸೇರಿ ಕಾಂಗ್ರೆಸ್‌ ಒಟ್ಟು ರೂ 135 ಕೋಟಿ ತೆರಿಗೆ ಪಾವತಿಸಬೇಕಿತ್ತು. ಆದರೆ ಪಕ್ಷದಿಂದ 65.94 ಕೋಟಿ ರೂ.ಗಳನ್ನು ವಸೂಲಿ ಮಾಡಿರುವುದು ಸೇರಿದಂತೆ ಈಚಿನ ಬೆಳವಣಿಗೆಗಳನ್ನು ಗಮನಿಸಿದ ನ್ಯಾಯಾಲಯವು ತಡೆಯಾಜ್ಞೆ ನೀಡುವಂತೆ ಹೊಸದಾಗಿ ಐಟಿಎಟಿ ಮುಂದೆ ಅರ್ಜಿ ಸಲ್ಲಿಸಲು ಕಾಂಗ್ರೆಸ್‌ ಪಕ್ಷಕ್ಕೆ ಅವಕಾಶವಿತ್ತಿದೆ.

ಪಕ್ಷ ಅರ್ಜಿ ಸಲ್ಲಿಸಿದರೆ ಅದನ್ನು ಹೊಸದಾಗಿ ಪರಿಗಣಿಸುವಂತೆ ನ್ಯಾಯಾಲಯ ಐಟಿಎಟಿಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್

ಮಾರ್ಚ್ 12 ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಐಟಿಎಟಿ ಆದೇಶದಲ್ಲಿ ಯಾವುದೇ ಮೂಲಭೂತ ದೌರ್ಬಲ್ಯಗಳಿಲ್ಲ ಎಂದು ಹೇಳಿತ್ತು.

ಪಕ್ಷದ ವಿರುದ್ಧದ ವಿಚಾರಣೆಗಳು 2021 ರಲ್ಲಿ ಪ್ರಾರಂಭವಾಗಿದ್ದರೂ ತಡವಾಗಿ ನ್ಯಾಯಾಲಯದ ಮೆಟ್ಟಿಲೇರಿದ ಪಕ್ಷದ ನಡೆಯನ್ನು ಗಮನಿಸಿದ ನ್ಯಾಯಪೀಠ, ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಯಾರೋ "ನಿದ್ರೆಗೆ ಜಾರಿದ್ದರು" ಎಂದು ಹೇಳಿತ್ತು. ಇಡೀ ವಿಷಯವನ್ನು ತುಂಬಾ ಕೆಟ್ಟದಾಗಿ ನಿರ್ವಹಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

2018-19ರ ತೆರಿಗೆ ನಿರ್ಧರಣಾ ವರ್ಷದಲ್ಲಿ ಬಾಕಿ ಇರುವ 105 ಕೋಟಿ ರೂ.ಗಳ ತೆರಿಗೆಯನ್ನು ವಸೂಲಿ ಮಾಡುವಂತೆ ಐಟಿ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ನೀಡಿತ್ತು.

ತನಗೆ ಯಾವುದೇ ಆದಾಯ ಬರುತ್ತಿಲ್ಲ ಎಂದು ಕಾಂಗ್ರೆಸ್‌ ಘೋಷಿಸಿದ್ದನ್ನು ಜುಲೈ 2021ರಲ್ಲಿ ನಿರಾಕರಿಸಿದ್ದ ಐಟಿ ಅಧಿಕಾರಿಗಳು ₹105 ಕೋಟಿಗಿಂತಲೂ ಅಧಿಕ ತೆರಿಗೆ ಸಂದಾಯ ಮಾಡುವಂತೆ ಸೂಚಿಸಿದ್ದರು.

ನಿಗದಿತ ಅವಧಿ ಮೀರಿ ತೆರಿಗೆ ರಿಟರ್ನ್ ಸಲ್ಲಿಸಲಾಗಿದ್ದು ವಿವಿಧ ವ್ಯಕ್ತಿಗಳಿಂದ ಪಕ್ಷ 14,49,000 ರೂಪಾಯಿ 'ದೇಣಿಗೆʼ ಸ್ವೀಕರಿಸಿದೆ. ಪ್ರತಿಯೊಂದು ದೇಣಿಗೆ ಸ್ವೀಕಾರವೂ ₹2,000ಕ್ಕಿಂತ ಹೆಚ್ಚಿನ ಮೊತ್ತದ್ದಾಗಿದೆ ಎಂಬ ಆಧಾರದ ಮೇಲೆ ತೆರಿಗೆ ಸಂದಾಯ ಮಾಡುವಂತೆ ನೋಟಿಸ್‌ ನೀಡಲಾಗಿತ್ತು.

ರಾಜಕೀಯ ಪಕ್ಷಗಳಿಗೆ ತೆರಿಗೆಯಿಂದ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸುವ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 13ಎಯನ್ನು ಈ ನೋಟಿಸ್‌ ಉಲ್ಲಂಘಿಸುತ್ತದೆ ಎನ್ನಲಾಗಿತ್ತು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಕಷ್ಟ ತಂದೊಡ್ಡುವ ಉದ್ದೇಶ ತೆರಿಗೆ ಇಲಾಖೆಯು ಆರಂಭಿಸಿರುವ ವಸೂಲಾತಿ ಪ್ರಕ್ರಿಯೆಯ ಹಿಂದೆ ಇದೆ ಎಂದು ಐಟಿಎಟಿ ಎದುರು ಕಾಂಗ್ರೆಸ್‌ ಅಳಲು ತೋಡಿಕೊಂಡಿತ್ತು.

ಆದರೆ ತಾನು ಕಾಂಗ್ರೆಸ್ ಖಾತೆಗಳಿಗೆ ಸಂಬಂಧಿಸಿದ ವಹಿವಾಟು ಸ್ಥಗಿತಗೊಳಿಸಲು ಬ್ಯಾಂಕುಗಳಿಗೆ ಯಾವುದೇ ಆದೇಶ ಅಥವಾ ನಿರ್ದೇಶನ ನೀಡಿಲ್ಲ. ಬದಲಿಗೆ ತೆರಿಗೆ ಬಾಕಿ ಪಾವತಿಸುವಂತೆ ಮಾತ್ರ ಸೂಚಿಸಿದ್ದಾಗಿ ಐಟಿಎಟಿಗೆ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ತಿಳಿಸಿತ್ತು.

ಕಾಂಗ್ರೆಸ್‌ ನಿಗದಿತ ಗಡುವಿನೊಳಗೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಬೇಕಿತ್ತು ಎಂದು ಐಟಿಎಟಿಯ ವಿಸ್ತೃತ ತೀರ್ಪಿನಲ್ಲಿ ವಿವರಿಸಲಾಗಿತ್ತು. ತೀರ್ಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Indian National Congress v Deputy Commissioner of Income Tax Central - 19 & Ors.pdf
Preview