ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಅರವಿಂದ್ ಕೇಜ್ರಿವಾಲ್
ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಅರವಿಂದ್ ಕೇಜ್ರಿವಾಲ್ ಫೇಸ್‌ಬುಕ್‌
ಸುದ್ದಿಗಳು

ಸರ್ಕಾರದ ವಿರುದ್ಧ ಟೀಕೆ: ರಾಹುಲ್, ಅಖಿಲೇಶ್, ಕೇಜ್ರಿವಾಲ್ ವಿರುದ್ಧದ ಪಿಐಎಲ್‌ ತಿರಸ್ಕರಿಸಿದ ದೆಹಲಿ ಹೈಕೋರ್ಟ್

Bar & Bench

ಸರ್ಕಾರದ ವಿರುದ್ಧ ʼದಾರಿತಪ್ಪಿಸುವ ಮತ್ತು ಸುಳ್ಳು ಹೇಳಿಕೆʼ ನೀಡಿದ ಮತ್ತು 'ಭಾರತದ ವಿಶ್ವಾಸಾರ್ಹತೆಗೆʼ ಹಾನಿ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕ್ರಮ ಕೈಗೊಳ್ಳಲು ಭಾರತದ ಚುನಾವಣಾ ಆಯೋಗ ಮತ್ತು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.

ಕೈಗಾರಿಕೋದ್ಯಮಿಗಳು ನೀಡಬೇಕಿದ್ದ ₹16 ಲಕ್ಷ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದು ರಾಹುಲ್ ಗಾಂಧಿ, ಯಾದವ್ ಹಾಗೂ ಕೇಜ್ರಿವಾಲ್ ಅವರು ನೀಡಿದ್ದ ಹೇಳಿಕೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಭಾರತೀಯ ಮತದಾರರ ವಿವೇಚನಾಶಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಯಾರು ಸತ್ಯ ನುಡಿಯುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದಾಗಿ ಅವರಿಗೆ ತಿಳಿದಿದೆ ಎಂದು ಅಭಿಪ್ರಾಯಪಟ್ಟ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮಿತ್‌ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿತು.

"ಒಬ್ಬರು ದಿಕ್ಕುತಪ್ಪಿಸಬಹುದು ಇನ್ನೊಬ್ಬರು ಮುನ್ನಡೆಸಬಹುದು, ಜನ ನಿರ್ಧಾರ ಕೈಗೊಳ್ಳುತ್ತಾರೆ. ಭಾರತೀಯ ಮತದಾರರನ್ನು ಕಡೆಗಣಿಸದಿರಿ" ಎಂದು ನ್ಯಾಯಾಲಯ ಅವಲೋಕಿಸಿತು.

ವಿರೋಧ ಪಕ್ಷದ ನಾಯಕರ ಹೇಳಿಕೆಗಳಿಂದ ಯಾವುದೇ ಕೈಗಾರಿಕೋದ್ಯಮಿ ಅಥವಾ ಬೇರೆ ಯಾರಾದರೂ ಅಸಮಾಧಾನಗೊಂಡಿದ್ದರೆ, ಅವರು ನ್ಯಾಯಾಲಯಕ್ಕೆ ತೆರಳಲು ಅವಕಾಶವಿದ್ದು ಮೂರನೇ ವ್ಯಕ್ತಿ ಪಿಐಎಲ್ ಸಲ್ಲಿಸುವ ಅಗತ್ಯವಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಮನಮೋಹನ್ ಹೇಳಿದರು.

"ಕೈಗಾರಿಕೋದ್ಯಮಿಗಳಿಗೆ ತೊಂದರೆಯಾದರೆ ಅಥವಾ ರಾಜಕಾರಣಿಗಳು ಸಂಕಷ್ಟಕ್ಕೀಡಾದರೆ, ಅವರು ಕ್ರಮಕ್ಕೆ ಮುಂದಾಗುತ್ತಾರೆ... ಮತದಾರನ ಬುದ್ಧಿಶಕ್ತಿಯನ್ನು ಕಡೆಗಣಿಸಬೇಡಿ. ಅವರು ತುಂಬಾ ವಿವೇಚನೆ ಉಳ್ಳವರು. ಯಾರು ಸತ್ಯ ಹೇಳುತ್ತಿದ್ದಾರೆ ಯಾರು ಹೇಳುತ್ತಿಲ್ಲ ಎಂದು ಅವರಿಗೆ ತಿಳಿದಿದೆ. ಇದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಡಿ. ಅವರು ರಾಜಕೀಯ ವ್ಯಕ್ತಿಗಳು" ಎಂದು ನ್ಯಾಯಾಲಯ ನುಡಿಯಿತು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮಿತ್‌ ಪ್ರೀತಮ್ ಸಿಂಗ್ ಅರೋರಾ

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡುವುದಿಲ್ಲ ಜೊತೆಗೆ ಅರ್ಜಿದಾರರ ಪರವಾಗಿ ನ್ಯಾಯಾಲಯಕ್ಕೆ ಕಾನೂನು ಕ್ರಮ ಜರುಗಿಸುವಂತೆ ಹೇಳುವ ತತ್ವವನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ಪೀಠ ನುಡಿಯಿತು.

ತಾನು ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಅರ್ಜಿದಾರ ಸುರ್ಜಿತ್ ಸಿಂಗ್ ಯಾದವ್ ಹೇಳಿಕೊಂಡಿದ್ದರು.

ಪ್ರತಿಪಕ್ಷದ ರಾಜಕಾರಣಿಗಳ ಹೇಳಿಕೆಗಳು ಭಾರತದ ಬಗ್ಗೆ ನಕಾರಾತ್ಮಕ ಚಿತ್ರಣ ನೀಡಿವೆ. ದೇಶದ ಮತ್ತು ಕೇಂದ್ರ ಸರ್ಕಾರದ ವಿಶ್ವಾಸಾರ್ಹತೆಗೆ ಕುಂದುಂಟು ಮಾಡಿವೆ. ಈ ಹೇಳಿಕೆಗಳು ವಿದೇಶಿ ಹೂಡಿಕೆ ಮತ್ತು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಬಹುದು ಮತ್ತು ಅರಾಜಕತೆ ಸೃಷ್ಟಿಸಬಹುದು ಎಂದು ಯಾದವ್‌ ಹೇಳಿದ್ದರು.

ಈ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ, ಸುದ್ದಿ ವೇದಿಕೆ ಹಾಗೂ ರಾಜಕೀಯ ಪಕ್ಷಗಳ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತೆಗೆದುಹಾಕುವಂತೆಯೂ ಯಾದವ್ ಒತ್ತಾಯಿಸಿದ್ದರು.