ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಹವಾನಿಯಂತ್ರಣ (AC) ಸೌಲಭ್ಯ ಒದಗಿಸುವುದಕ್ಕಾಗಿ ಖಾಸಗಿ ಶಾಲೆಗಳು ಶುಲ್ಕ ವಿಧಿಸುತ್ತಿರುವುದನ್ನು ತಡೆಯುವಂತೆ ದೆಹಲಿಯ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಲಿ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಮನೀಶ್ ಗೋಯೆಲ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಪ್ರಯೋಗಾಲಯ ಶುಲ್ಕ, ಸ್ಮಾರ್ಟ್ ಕ್ಲಾಸ್ ಶುಲ್ಕವನ್ನು ಶಾಲಾ ಆಡಳಿತ ಮಂಡಳಿ ವಿಧಿಸುತ್ತಿದ್ದು ಮಕ್ಕಳಿಗೆ ಒದಗಿಸುವ ಎ ಸಿ ಸೇವೆಯ ವೆಚ್ಚ ಅವುಗಳಿಗಿಂತ ಭಿನ್ನವಾಗಿರದೇ ಇರುವುದರಿಂದ ಇದನ್ನು ಕೂಡ ಪೋಷಕರೇ ಭರಿಸಬೇಕಾಗುತ್ತದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಎಸಿ, ಸ್ಮಾರ್ಟ್ ಕ್ಲಾಸ್ ಅಥವಾ ಲ್ಯಾಬ್‌ನಂತಹ ಸೌಲಭ್ಯಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ ಆರ್ಥಿಕ ಹೊರೆಯನ್ನು ಶಾಲಾ ಆಡಳಿತ ಮಂಡಳಿಯ ಮೇಲೆ ಮಾತ್ರವೇ ಹೇರಲಾಗದು ಎಂದು ನ್ಯಾಯಾಲಯ ನುಡಿದಿದೆ.
ಅಲ್ಲದೆ ಶಿಕ್ಷಣ ಇಲಾಖೆ ಕೂಡ ಈ ಮನವಿ ಸ್ವೀಕರಿಸಿದ್ದು ಅದು ಕ್ರಮ ಕೈಗೊಂಡ ವರದಿಯ ನಿರೀಕ್ಷೆಯಲ್ಲಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಲು ತನಗೆ ಒಲವಿಲ್ಲ ಎಂದ ಪೀಠ ಅದನ್ನು ವಜಾಗೊಳಿಸಿತು.
ತನ್ನ ಮಗು ಓದುತ್ತಿದ್ದ ದೆಹಲಿಯ ಖಾಸಗಿ ಶಾಲೆಯೊಂದು ಎ ಸಿ ಸೌಲಭ್ಯ ಒದಗಿಸುವುದಕ್ಕಾಗಿ ತಿಂಗಳಿಗೆ ₹2,000 ಶುಲ್ಕ ವಿಧಿಸುತ್ತಿದೆ. ವಿದ್ಯಾರ್ಥಿಗಳಿಗೆ ಎಸಿ ಒದಗಿಸುವ ಜವಾಬ್ದಾರಿಯು ಶಾಲಾ ಆಡಳಿತದ ಮೇಲಿದ್ದುಈ ಸೌಲಭ್ಯವನ್ನು ಶಾಲೆ ತನ್ನ ಸ್ವಂತ ಹಣ ಮತ್ತು ಸಂಪನ್ಮೂಲಗಳಿಂದ ಒದಗಿಸಬೇಕು ಎಂದು ಮನೀಶ್ ಗೋಯೆಲ್ ಎಂಬುವರು ಪಿಐಎಲ್ ಸಲ್ಲಿಸಿದ್ದರು.