Air India  
ಸುದ್ದಿಗಳು

ಅಹಮದಾಬಾದ್ ವಿಮಾನ ದುರಂತದ ವಿವರ ಬಹಿರಂಗಕ್ಕೆ ಮನವಿ: ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

ಇಂಧನವನ್ನು ನಿಖರವಾಗಿ ಯಾವಾಗ ಸ್ಥಗಿತಗೊಳಿಸಲಾಯಿತು ಹಾಗೂ ಎಂಜಿನ್‌ಗಳು ಯಾವ ಸಮಯದಲ್ಲಿ ಕಾರ್ಯನಿರ್ವಹಣೆ ನಿಲ್ಲಿಸಿವೆ ಎಂಬ ವಿವರಗಳನ್ನು ಒದಗಿಸಲು ಅರ್ಜಿ ಕೋರಿತ್ತು.

Bar & Bench

ಕಳೆದ ವರ್ಷದ ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿ ಇಂಧನವನ್ನು ಸ್ಥಗಿತಗೊಳಸಿದ್ದು ನಿಖರವಾಗಿ ಯಾವಾಗ ಎಂಬ ಮಾಹಿತಿ ಬಹಿರಂಗಪಡಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಬುಧವಾರ ತಿರಸ್ಕರಿಸಿತು.‌

ವಿಮಾನದ ಇಂಧನ ದಹನ ಪ್ರಕ್ರಿಯೆ ನಿಂತ ಸಮಯ (ಇದರಿಂದ ಎಂಜಿನ್‌ ವಿಮಾನವನ್ನು ತಳ್ಳುವ ಶಕ್ತಿ (ಥ್ರಸ್ಟ್‌) ಉತ್ಪಾದನೆ ನಿಲ್ಲಿಸುತ್ತದೆ. ಹೀಗಾದಾಗ ವಿಮಾನ ಮುಂದಕ್ಕೆ ಚಲಿಸುವುದು ಅಸಾಧ್ಯವಾಗುತ್ತದೆ) ಸೇರಿದಂತೆ ಘಟನಾವಳಿಗಳ ಸಂಪೂರ್ಣ ಕಾಲಾನುಕ್ರಮಣಿಕೆಯ ವಿವರ ನೀಡುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್‌ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್‌ ಕಾರಿಯಾ ಅವರಿದ್ದ ವಿಭಾಗೀಯ ಪೀಠವನ್ನು ಕೋರಿದ್ದರು.

ಜುಲೈ 2025 ರ ಪ್ರಾಥಮಿಕ ತನಿಖಾ ವರದಿಯ ವ್ಯಾಪ್ತಿಯನ್ನು ಸೀಮಿತವಾಗಿ ಅರ್ಥೈಸಲು ಕೋರಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ತನಿಖಾ ವರದಿಗಳನ್ನು ಸೀಮಿತಗೊಳಿಸಲು ಕೋರಿರುವ ಮನವಿಯನ್ನು ಮಾನ್ಯ ಮಾಡಲಾಗದು ಎಂದು ನ್ಯಾಯಾಲಯ ನುಡಿಯಿತು. ಅಲ್ಲದೆ, ಪ್ರಾಥಮಿಕ ವರದಿಯನ್ನು ಅರ್ಥೈಸಲು ತಾನು ತಜ್ಞರ ಸಮಿತಿಯಲ್ಲ ಎಂದು ತಿಳಿಸಿತು.

ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ ಕಾಯ್ದೆ) ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಿತ್ತು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರ ಸುರೇಶ್ ಚಂದ್ ಶ್ರೀವಾಸ್ತವ ಅವರು, ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸಿದ್ಧಪಡಿಸಿದ ಪ್ರಾಥಮಿಕ ತನಿಖಾ ವರದಿಯಲ್ಲಿ ಪ್ರಮುಖ ಹಾಗೂ ಅಗತ್ಯ ಮಾಹಿತಿಗಳು ಒಳಗೊಂಡಿಲ್ಲ ಎಂದು ವಾದಿಸಿದ್ದರು. . ಅಪಘಾತಕ್ಕೆ ಸಂಬಂಧಿಸಿದ ತಾಂತ್ರಿಕ ವಿವರಗಳು ಸ್ಪಷ್ಟವಾಗಿಲ್ಲದ ಕಾರಣ ಸಾರ್ವಜನಿಕರಿಗೆ ಸಂಪೂರ್ಣ ಸತ್ಯ ತಿಳಿಯುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ವಿಶೇಷವಾಗಿ, ಇಂಧನ ಸ್ವಿಚ್ ‘ರನ್’ ಸ್ಥಾನದಿಂದ ‘ಕಟ್‌ಆಫ್’ ಸ್ಥಾನಕ್ಕೆ ನಿಖರವಾಗಿ ಯಾವ ಸಮಯದಲ್ಲಿ ಬದಲಾಯಿಸಲಾಯಿತು ಮತ್ತು ಅದನ್ನು ಪೈಲಟ್‌ಗಳೇ ನಿಲ್ಲಿಸಿದ್ದರೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು. ಜೊತೆಗೆ, ಪ್ರತಿಯೊಂದು ಎಂಜಿನ್ ಯಾವ ಸಮಯದಲ್ಲಿ ‘ಇಂಧನ ದಹನ ಪ್ರಕ್ರಿಯೆ’ ನಿಂತಿತು ಎಂಬುದರ ಸಮಗ್ರ ಮಾಹಿತಿಯನ್ನು ವಿವರಿಸುವಂತೆ ಅವರು ಕೋರಿದ್ದರು.

ಅದೇ ವೇಳೆ, ಎಂಜಿನ್‌ಗಳಲ್ಲಿ ಸಂಭವಿಸಿದ ‘ಫ್ಲೇಮ್‌ಔಟ್’ಗೆ (ಎಂಜಿನ್‌ನಲ್ಲಿ ಇಂಧನ ದಹನ ಪ್ರಕ್ರಿಯೆ ಸ್ಥಗಿತಗೊಳ್ಳುವುದು) ಎಂಜಿನ್ ಸರ್ಜ್ (ಎಂಜಿನ್‌ನ ಕ್ರಾಂಕ್‌ಶಾಫ್ಟ್‌ನ ತಿರುಗುವಿಕೆಯಲ್ಲಿ ಉಂಟಾಗುವ ಏರುಪೇರು) ಕಾರಣವಾಗಿರುವ ಸಾಧ್ಯತೆ ಹೆಚ್ಚಿದೆ ಎಂಬ ಶಂಕೆಯನ್ನು ಅರ್ಜಿದಾರರು ವ್ಯಕ್ತಪಡಿಸಿದ್ದರು. ಸಾರ್ವಜನಿಕ ಹಿತದೃಷ್ಟಿಯಿಂದ ಅಪಘಾತದ ನಿಖರ ಕಾರಣ ಮತ್ತು ಘಟನಾವಳಿಯನ್ನು ಕಾಲಾನುಕ್ರಮಣಿಕೆಯಲ್ಲಿ ಬಹಿರಂಗವಾಗಬೇಕು ಎಂದು ಅವರು ಮನವಿ ಮಾಡಿದ್ದರು.