Delhi HC, Google Pay
Delhi HC, Google Pay 
ಸುದ್ದಿಗಳು

ಗೂಗಲ್ ಪೇ ಸ್ಥಗಿತ ಕೋರಿದ್ದ ಪಿಐಎಲ್‌ಗಳ ತಿರಸ್ಕಾರ: ಗೂಗಲ್ ಪೇಗೆ ಆರ್‌ಬಿಐನ ಅನುಮತಿ ಅಗತ್ಯವಿಲ್ಲ ಎಂದ ದೆಹಲಿ ಹೈಕೋರ್ಟ್

Bar & Bench

ನಿಯಂತ್ರಕ ಮತ್ತು ಗೌಪ್ಯತಾ ನಿಯಮಗಳ ಉಲ್ಲಂಘನೆಗಾಗಿ ಭಾರತದಲ್ಲಿ ಗೂಗಲ್ ಪೇ ಕಾರ್ಯಾಚರಣೆ ಸ್ಥಗಿತಗೊಳಿಸಲು  ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.

ಗೂಗಲ್‌ ಪೇ ಕೇವಲ ತೃತೀಯ  ಆ್ಯಪ್ ಪೂರೈಕೆದಾರನಾಗಿದ್ದು  ಪಾವತಿ ಮತ್ತು ಬಾಕಿ ಹಣ ಇತ್ಯರ್ಥ ಕಾಯಿದೆ (ಪಿಎಸ್‌ಎಸ್‌ ಕಾಯಿದೆ) ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯಾವುದೇ ದೃಢೀಕರಣ ನೀಡುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಪಿಎಸ್‌ಎಸ್ ಕಾಯಿದೆಯಡಿಯಲ್ಲಿ ಗೂಗಲ್ ಪೇ ʼಸಿಸ್ಟಮ್ ಪೂರೈಕೆದಾರʼನಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತದಲ್ಲಿನ ವಹಿವಾಟುಗಳಿಗಾಗಿ ಇರುವ ಯುಪಿಐ ವ್ಯವಸ್ಥೆಯ ಆಪರೇಟರ್‌ ಎನ್‌ಪಿಸಿಐ [ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ] ಆಗಿದೆ. ಅದು ವಹಿವಾಟುಗಳನ್ನು ಸುಗಮಗೊಳಿಸಲು ತನ್ನ ಸೇವೆಗಳನ್ನು ವಿಸ್ತರಿಸಲು ಆರ್‌ಬಿಐ ಪಿಎಸ್‌ಎಸ್ ಕಾಯಿದೆಯಡಿಯಲ್ಲಿ ಅಧಿಕಾರ ಹೊಂದಿರುವ ʼಸಿಸ್ಟಮ್ ಪ್ರೊವೈಡರ್ʼ ಆಗಿದೆ. ಗೂಗಲ್‌ ಪೇನಿಂದ ಯುಪಿಐ ಮೂಲಕ ನಡೆಸುವ ವಹಿವಾಟುಗಳು  ಪೀರ್-ಟು-ಪೀರ್ ಅಥವಾ ಪೀರ್-ಟು-ಮರ್ಚೆಂಟ್ ವಹಿವಾಟುಗಳಾಗಿವೆ. ಪಿಎಸ್‌ಎಸ್‌ ಕಾಯಿದೆ- 2007ರ ಅಡಿಯಲ್ಲಿ ಗೂಗಲ್‌ ಪೇ ಸಿಸ್ಟಮ್‌ ಪೂರೈಕೆದಾರನಲ್ಲ ಎಂದು ನ್ಯಾಯಾಲಯ ವಿವರಿಸಿದೆ.

ಬಳಕೆದಾರರ  ಸೂಕ್ಷ್ಮ ಮತ್ತು ಖಾಸಗಿ ಮಾಹಿತಿಯನ್ನು ಗೂಗಲ್‌ ಪೇ ಸಕ್ರಿಯವಾಗಿ ಪಡೆದು ಸಂಗ್ರಹಿಸುತ್ತದೆ ಎಂದು ಖುದ್ದು ವಾದ ಮಂಡಿಸಿದ್ದ ಅರ್ಜಿದಾರ ಹಾಗೂ ಅಭಿಜಿತ್‌ ಮಿಶ್ರಾ ಅವರ ನಿಲುವನ್ನು ಪೀಠ ತಿರಸ್ಕರಿಸಿತು.  ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದ ಮಿಶ್ರಾ ಈ ಸಂಬಂಧ ಆರ್‌ಬಿಐ ಹಾಗೂ ಇನ್ನಿತರರನ್ನು ಮತ್ತು ಯುಐಡಿಎಐ ಮತ್ತಿತರರನ್ನು ಪಕ್ಷಕಾರರನ್ನಾಗಿ ಮಾಡಿದ್ದರು.

"ಯುಪಿಐ ಮಾರ್ಗಸೂಚಿ- 2019  ಕೂಡ ಮಾಹಿತಿಯನ್ನು ಎರಡು ಪ್ರಕಾರಗಳ ಅಡಿ ಸಂಗ್ರಹಿಸಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ.  ಅವುಗಳೆಂದರೆ, 'ಗ್ರಾಹಕರ ಮಾಹಿತಿ' ಮತ್ತು 'ಗ್ರಾಹಕ ಪಾವತಿಗಳ ಸೂಕ್ಷ್ಮ ಮಾಹಿತಿ'. ಮೊದಲನೆಯದನ್ನು ಎನ್‌ಕ್ರಿಪ್ಟ್ ಮಾಡಿದ ವಿಧದಲ್ಲಿ ಅಪ್ಲಿಕೇಶನ್ ಪೂರೈಕೆದಾರರು ಸಂಗ್ರಹಿಸಬಹುದಾದರೂ, ಎರಡನೆಯದನ್ನು ಪಾವತಿ ಸೇವೆ ಒದಗಿಸುವವರ ಬ್ಯಾಂಕ್ ವ್ಯವಸ್ಥೆಗಳು ಮಾತ್ರ ಸಂಗ್ರಹಿಸಬಹುದಾಗಿದೆಯೇ ಹೊರತು ಗೂಗಲ್‌ ಪೇ ಅಲ್ಲ” ಎಂದು ನ್ಯಾಯಾಲಯ ಹೇಳಿದೆ.